ಬರ್ಲಿನ್, ಫೆ.18, 2000-2020ನೇ ಸಾಲಿನ ಲಾರಿಯಸ್ ಸ್ಟ್ರೋರ್ಟ್ಸಿಂಗ್ ಮೊಮೆಂಟ್ ಪ್ರಶಸ್ತಿಯನ್ನು ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ ತೆಂಡೂಲ್ಕರ್ ಪಡೆದುಕೊಂಡಿದ್ದಾರೆ. ಮುಂಬೈ ನಲ್ಲಿ ನಡೆದಿದ್ದ 2011ರ ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದಾಗ ಸಹ ಆಟಗಾರರು ಸಚಿನ್ ಅವರನ್ನು ತಮ್ಮ ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಈ ಕ್ಷಣಕ್ಕೆ ಲಾರಿಯಸ್ ಶ್ರೇಷ್ಠ ಕ್ರೀಡಾ ಕ್ಷಣ ಪ್ರಶಸ್ತಿ ಲಭಿಸಿದೆ. ತಮ್ಮ ವೃತ್ತಿ ಜೀವನದಲ್ಲಿ ಆರು ಬಾರಿ ವಿಶ್ವಕಪ್ ನಲ್ಲಿ ಭಾರತ ತಂಡದ ಪರ ಆಡಿರುವ ಸಚಿನ್, ತಮ್ಮ ಕೊನೆಯ ಪ್ರಯತ್ನದಲ್ಲಿ ದೇಶಕ್ಕೆ ಎರಡನೇ ಬಾರಿಗೆ ವಿಶ್ವಕಪ್ ಮುಕುಟ ತೊಡಿಸಿದರು. ಫೈನಲ್ ಪಂದ್ಯದಲ್ಲಿ ಧೋನಿ, ನುವಾನ್ ಕುಲಸೇಕರ್ ಅವರ ಎಸೆತವನ್ನು ಸಿಕ್ಸರ್ ಗೆ ಅಟ್ಟುತ್ತಲೆ ಭಾರತದಲ್ಲಿ ಸಂಭ್ರಮ ಮನೆ ಮಾಡಿತ್ತು.
ವಿಶ್ವಕಪ್ ಗೆಲ್ಲುವ ಕನಸು ಕಂಡು, ನನಸಾದ ಕ್ಷಣವನ್ನು ಸಚಿನ್ ಆನಂದಿಸಿದರು. ಇದೇ ವೇಳೆ ದಿಗ್ಗಜ ಆಟಗಾರನನ್ನು ಸಹ ಆಟಗಾರರು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಟೆನಿಸ್ ದಂತಕತೆ ಬ್ರೋಸ್ ಬೆಕೆರ್ ಪ್ರಶಸ್ತಿ ಘೋಷಿಸಿದರು. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಅವರು ತೆಂಡೂಲ್ಕರ್ ಅವರಿಗೆ ಪ್ರಶಸ್ತಿ ನೀಡಿದರು. ಟ್ರೋಫಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿನ್, “ವಿಶ್ವಕಪ್ ಗೆದ್ದ ಕ್ಷಣವನ್ನು ಪದಗಳಲ್ಲಿ ವರ್ಣಿಸಲು ಆಗದು. ಇಡೀ ದೇಶ ವಿಶ್ವಕಪ್ ಗೆದ್ದ ಸಂಭ್ರಮಾಚರಣೆ ಆಚರಿಸಿತು. ಈ ಟ್ರೋಫಿ ಪಡೆದಿರಿವುದು ಮಹಾ ಗೌರವ” ಎಂದು ತಿಳಿಸಿದರು.