ಕ್ರೈಸ್ಟ್ ಚರ್ಚ್ , ಜ 30 ಫೆಬ್ರುವರಿ 5 ರಿಂದ ಭಾರತದ ವಿರುದ್ಧ ಆರಂಭವಾಗುವ ಏಕದಿನ ಸರಣಿಗೆ ಕೈಲ್ ಜಾಮಿಸನ್ ಅವರಿಗೆ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.ಕಳೆದ 2017ರ ಐರ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಸ್ಕಾಟ್ ಕಗ್ಲೇಜಿನ್ ಮತ್ತು ಹಾಮಿಶ್ ಬೆನೆಟ್ ಅವರ ಜತೆ ಕೈಲ್ ಜಾಮಿಸನ್ ಕೂಡ ಚೊಚ್ಚಲ ಪದಾರ್ಪಣೆ ಮಾಡಿದ್ದರು. ದೀರ್ಘಾವಧಿ ಬಳಿಕ ಅವರು ಮತ್ತೊಮ್ಮೆ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಟ್ರೆಂಟ್ ಬೌಲ್ಟ್, ಲಾಕಿ ಫರ್ಗೂಸನ್ ಹಾಗೂ ಮ್ಯಾಟ್ ಹೆನ್ರಿ ಅವರು ಗಾಯಕ್ಕೆ ತುತ್ತಾಗಿದ್ದು, ಅವರು ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಟಾಮ್ ಲಥಾಮ್ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಹಾಗಾಗಿ, ಅವರು 13 ಆಟಗಾರರ ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕಾಲಿನ್ ಡಿ ಗ್ರಾಡ್ಹೋಮ್, ಜಿಮ್ಮಿ ನೀಶಾಮ್ ಹಾಗೂ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಅವರು ಆಲ್ರೌಂಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹೆನ್ರಿ ನಿಕೋಲ್ಸ್ ಅವರು ಮಾರ್ಟಿನ್ ಗುಪ್ಟಿಲ್ ಅವರ ಜತೆ ಆರಂಭಿಕನಾಗಿ ಇನಿಂಗ್ಸ್ ಆರಂಭಿಸಲಿದ್ದಾರೆ.ಸೆಡಾನ್ ಪಾರ್ಕ್ ನಲ್ಲಿ ನಡೆಯುವ ಮೊದಲನೇ ಏಕದಿನ ಪಂದ್ಯಕ್ಕೆ ಲೆಗ್ ಸ್ಪಿನ್ನರ್ ಇಶ್ ಸೋಧಿ ತಂಡ ಸೇರ್ಪಡೆಯಾಗಲಿದ್ದಾರೆ. ನಂತರ ಅವರು ನ್ಯೂಜಿಲೆಂಡ್ ಎ ತಂಡದ ಪರ ಆಡುತ್ತಿರುವ ಹಿನ್ನೆಲೆಯಲ್ಲಿ ನಂತರದ ಪಂದ್ಯಗಳಿಗೆ ಅವರು ಅಲಭ್ಯರಾಗಿದ್ದಾರೆ.ನ್ಯೂಜಿಲೆಂಡ್ ಏಕದಿನ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಹಾಮಿಶ್ ಬೆನೆಟ್, ಟಾಮ್ ಬ್ಲಂಡೆಲ್, ಕಾಲಿನ್ ಡಿ ಗ್ರಾಂಡ್ಹೋಮ್, ಮಾರ್ಟಿನ್ ಗುಪ್ಟಿಲ್, ಕೈಲ್ ಜಾಮಿಸನ್, ಸ್ಕಾಟ್ ಕಗ್ಲೇಜಿನ್, ಟಾಮ್ ಲಥಾಮ್ (ವಿ.ಕೀ), ಜಿಮ್ಮಿ ನಿಶಾಮ್, ಹೆನ್ರಿ ನಿಕೋಲ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, (ಮೊದಲ ಪಂದ್ಯ), ಟಿಮ್ ಸೌಥೆ ಹಾಗೂ ರಾಸ್ ಟೇಲರ್.