ಗ್ಯಾರಂಟಿ ಯೋಜನೆಗಳಿಂದ ಸ್ವಾವಲಂಬಿ ಜೀವನ: ಕೆ.ಇ.ಚಿದಾನಂದಪ್ಪ

Kurugodu Taluk Guarantee Schemes Progress Review Meeting

ಕುರುಗೋಡು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆ 

ಬಳ್ಳಾರಿ 11: ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಬಡವರು, ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಸಾಧ್ಯವಾಗುತ್ತಿದೆ ಮತ್ತು ರಾಜ್ಯದ ಜನರ ಆದಾಯವು ಬೆಳವಣಿಗೆಯಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಹೇಳಿದರು. 

ಅವರು, ಮಂಗಳವಾರ ಕುರುಗೋಡು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಏರಿ​‍್ಡಸಿದ್ದ ಕುರುಗೋಡು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ರಾಜ್ಯದ ಪ್ರತಿ ವಿಧಾನಸಭಾವ್ಯಾಪ್ತಿಯಲ್ಲಿ ವರ್ಷಕ್ಕೆ 233 ಕೋಟಿ ಹಣ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಖರ್ಚು ಮಾಡಲಾಗುತ್ತಿದೆ. ಇದು ಸಾರ್ಥಕವಾಗಬೇಕೆಂದರೆ ಗ್ಯಾರಂಟಿ ಯೋಜನೆಗಳ ಕುರಿತು ಜನರಿಗೆ ಮಾಹಿತಿ ಮತ್ತು ಮಾರ್ಗದರ್ಶನ ಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು. 

2025 -26 ಬಜೆಟ್ ನಲ್ಲಿ 51,275 ಕೋಟಿ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡುವ ಮೂಲಕ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಿಸುವುದಿಲ್ಲ ಎಂಬ ಸಂದೇಶ ರಾಜ್ಯದ ಮುಖ್ಯಮಂತ್ರಿಗಳು ನೀಡಿದ್ದಾರೆ. ಮಹಿಳಾ ಸಬಲೀಕರಣ ಮೂಲಕ ಇಡೀ ರಾಜ್ಯವನ್ನು ಪ್ರಗತಿ ಪಥದಲ್ಲಿ ನಡೆಸುವ ಸಂಕಲ್ಪ ರಾಜ್ಯ ಸರ್ಕಾರ ಹೊಂದಿದೆ ಎಂದರು. 

ಗೃಹಲಕ್ಷ್ಮಿ ಫಲಾನುಭವಿಗಳಿಗಳನ್ನು ಸ್ವಸಹಾಯ ಗುಂಪುಗಳ ಸದಸ್ಯರನ್ನಾಗಿ ಮಾಡಿ ಉಳಿತಾಯ ಮತ್ತು ಉದ್ಯಮಶೀಲತೆ ಹೆಚ್ಚಿಸಲು ಅಕ್ಕಿ ಕೋ-ಆಪರೇಟಿವ್ ಸೊಸೈಟಿ ಸ್ಥಾಪಿಸಿ ಅವರಿಗೆ ಇಂದಿರಾ ಕ್ಯಾಂಟೀನ್, ಅಕ್ಕ ಕೆಫೆ, ಶಿಶುಪಾಲನೆ ವಾತ್ಸಲ್ಯ ಕೇಂದ್ರಗಳ ನಿರ್ವಹಣೆ ಹೊಣೆಗಾರಿಕೆ ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. 

ಇದೇ ತಿಂಗಳಿನಿಂದ ಪಡಿತರ ವ್ಯವಸ್ಥೆ ಮೂಲಕ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಇದರಿಂದ ಆಹಾರ ಇಲಾಖೆ ಜವಾಬ್ದಾರಿ ಇನ್ನೂ ಹೆಚ್ಚಾಗಲಿದೆ. ಕಾಳ ಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಆಗದಂತೆ ನೋಡಿಕೊಳ್ಳಬೇಕು. ನ್ಯಾಯ ಬೆಲೆ ಅಂಗಡಿ ಮಾಲೀಕರು ಅಥವಾ ಅಧಿಕಾರಿಗಳು ಯಾವುದೇ ಆಕ್ರಮಗಳಿಗೆ ಆಸ್ಪದ ನೀಡಬಾರದು. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಗ್ಯಾರಂಟಿ ಯೋಜನೆಗಳು ಅಭಿವೃದ್ದಿಗೆ ಪೂರಕವೇ ಹೊರತು, ಮಾರಕ ಅಲ್ಲ ಎನ್ನುವುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕು. ಶೇಕಡಾ ನೂರರಷ್ಟು ಯೋಜನೆಗಳ ಜಾರಿಗೆ ಪ್ರಯತ್ನ ಮಾಡಬೇಕು. ಐದು ಇಲಾಖೆ ಅಧಿಕಾರಿಗಳು, ಸಮಿತಿ ಅಧ್ಯಕ್ಷರು ಸದಸ್ಯರಿಗೆ ಸಹಕರಿಸಬೇಕು ಎಂದು ತಿಳಿಸಿದರು. 

ಮುಂದಿನ ದಿನಗಳಲ್ಲಿ ಗ್ರಾಮ, ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಮಹಿಳೆಯರ ಶಿಬಿರ ಏರಿ​‍್ಡಸಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಅದಕ್ಕಾಗಿ ಅಧಿಕಾರಿಗಳು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಕುರುಗೋಡು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಸವನಗೌಡ ಅವರು ಮಾತನಾಡಿ, ಎಲ್ಲಾರು ಸೇರಿ ಕುರುಗೋಡು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಲು ಪ್ರಯತ್ನಿಸೋಣ ಎಂದು ಹೇಳಿದರು. 

ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸದಸ್ಯರಾದ ಆನಂದ್, ರವಿಕುಮಾರ್ ರೆಡ್ಡಿ, ಶಿವರಾಜ್ ಹಾಗೂ ತಾಲ್ಲೂಕು ಸಮಿತಿ ಸದಸ್ಯರಾದ ಜಡೆಪ್ಪ, ಗೋಪಾಲ, ಕಾಶಿನಾಥ್ ಸ್ವಾಮಿ, ಯು.ಗಂಗಾಧರ, ಈರಣ್ಣ, ರಾಮಲಿಂಗ, ಬಿ.ಬಾಬು, ಹನುಮಂತ, ಸಾಳೆರು ಕೃಷ್ಣ, ಗಂಗಾಧರ, ಶೇಕ್ಷಾವಲಿ, ಲಿಂಗಪ್ಪ, ಹುಲಿಗೇಶ್ ಮತ್ತು ಕುರುಗೋಡು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ವಿ.ನಿರ್ಮಲ, ಎಸಿಡಿಪಿಓ, ಆಹಾರ ಇಲಾಖೆಯ ಮಲ್ಲಿಕಾರ್ಜುನ, ಜೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜೇಂದ್ರ ಪ್ರಸಾದ್, ಕೆಕೆಆರ್‌ಟಿಸಿ ಕುರುಗೋಡು ಬಸ್ ಘಟಕದ ಸಹಾಯಕ ವ್ಯವಸ್ಥಾಪಕ ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.