ಲೋಕದರ್ಶನ ವರದಿ
ಕುರುಗೋಡು 05: ಪಟ್ಟಣದ ಕಂಪ್ಲಿ ರಸ್ತೆ ಬಳಿ ಇರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳು ಮೂರು ವಿಗ್ರಹಗಳನ್ನು ಭಗ್ನಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ, ಅಯ್ಯಪ್ಪ ಸ್ವಾಮಿ, ಸುಬ್ರಮಣ್ಯ ದೇವರ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಇಂಥ ಘಟನೆಗಳು ಪದೇಪದೆ ನಡೆಯುತ್ತಿರುವುದನ್ನು ಖಂಡಿಸಿ ಭಕ್ತರು ದೇವಸ್ಥಾನದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು. ನಾಲ್ಕು ವರ್ಷಗಳ ಹಿಂದೆ ದೇವಸ್ಥಾನ ನಿರ್ಮಿಸಿದ್ದು, ಅಂದಿನಿಂದ ಹುಂಡಿ ಕಳ್ಳತನ, ವಿಗ್ರಹ ಭಗ್ನಗೊಳಿಸುವ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ದುಷ್ಕಮರ್ಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸ್ಥಳಕ್ಕೆ ತಹಸೀಲ್ದಾರ್ ಎಸ್.ಪದ್ಮಾಕುಮಾರಿ, ಡಿವೈಎಸ್ಪಿ ಅರುಣ್ ಕುಮಾರ್ ಕೋಳೂರು, ಸಿಪಿಐ ಮಂಜುನಾಥ, ಪಿಎಸ್ಐ ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮಾತನಾಡಿದ ಸಿಪಿಐ ಮಂಜುನಾಥ, ಕೃತ್ಯ ಎಸಗಿದ ದುಷ್ಕಮರ್ಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ದೇವಸ್ಥಾನ ಸಮಿತಿ ಸದಸ್ಯರು ಸಿಸಿ ಕ್ಯಾಮರಾ ಅಳವಡಿಸಬೇಕು. ಇನ್ನು ಮುಂದೆ ಪ್ರತಿದಿನ ಗಸ್ತು ವ್ಯವಸ್ಥೆ ಮಾಡುವ ಮೂಲಕ ಈ ರೀತಿಯ ಘಟನೆಗಳು ಮರುಕಳಿಸದಂತೆ ಜಾಗ್ರತೆ ವಹಿಸಲಾಗುವುದು ಎಂದರು.
ದೇವಸ್ಥಾನದ ಸಮಿತಿ ಅಧ್ಯಕ್ಷ ಎನ್.ರವೀಂದ್ರಗೌಡ, ಓಂಕಾರಯ್ಯಸ್ವಾಮಿ, ನಂದಿಕೋಲ್ ಬಸವರಾಜ್, ಲಾರಿ ಸಿದ್ದಯ್ಯಸ್ವಾಮಿ, ವಿ.ಎರ್ರಸ್ವಾಮಿ, ಟಿ.ವಿರೂಪಾಕ್ಷಿ, ಟಿ.ರಾಜಶೇಖರ್, ಕಗ್ಗಲ್ ಬಸವರಾಜ್, ಮಲ್ಲಿಕಾರ್ಜುನ್, ಜಕ್ಕಂಡಿ ರಮೇಶ್, ಗುರುಸ್ವಾಮಿ ಕೆ.ಗಾದಿಲಿಂಗಸ್ವಾಮಿ, ಎಂ.ಬಸವರಾಜ್, ವೆಂಕಟೇಶ್, ಕೆ.ಎಂ.ಉಮಾಪತಿಗೌಡ, ಹೂಗಾರ ಯೋಗೀಶ್ ಇತರರಿದ್ದರು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.