ಹಣ ನೀಡಿರುವುದು ಸತ್ಯವೆಂದು ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲಿ :ನಾರಾಯಣಗೌಡ ಸವಾಲು

ಕೆ ಆರ್ ಪೇಟೆ,ಆ 1   ಮಾಜಿ ಪ್ರಧಾನಿ ದೇವೇಗೌಡರ  ಕುಟುಂಬಕ್ಕೆ ಹಣ ನೀಡಿದ್ದೇನೆ ಎಂದು ತಾವು ಎಲ್ಲೂ ಹೇಳಿಲ್ಲ, ಆದರೂ, ಮಾಜಿ ಮುಖ್ಯಮಂತ್ರಿ   ಕುಮಾರಸ್ವಾಮಿ ತಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಅವರ ಹೇಳಿಕೆ ಸತ್ಯವೇ ಆಗಿದ್ದರೆ ಧರ್ಮ ಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ  ಎಂದು ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ಸವಾಲು ಹಾಕಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕ ಸ್ಥಾನದಿಂದ ಅನರ್ಹಗೊಂಡ ಕೆ ಸಿ ನಾರಾಯಣಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮನ್ನು ಓರ್ವ ಕ್ರಿಮಿನಲ್ ಎಂದು ಕರೆದಿದ್ದಾರೆ.ಅದಕ್ಕೆ ಸೂಕ್ತ ಸಂದರ್ಭ ಬಂದಾಗ ಉತ್ತರ ಕೊಡುತ್ತೇನೆ. ಎಚ್ ಡಿ ಕುಮಾರಸ್ವಾಮಿ ಅವರು ಸತ್ಯವನ್ನು ಹೇಳಬೇಕು.ತಮ್ಮನ್ನು ಕ್ರಿಮಿನಲ್ ಎನ್ನುತ್ತಾರೆ.ಆದರೆ ತಮ್ಮ ಮೇಲೆ ಒಂದೂ ಕ್ರಿಮಿನಲ್ ಪ್ರಕರಣಗಳು ಇಲ್ಲ.ದೇವೇಗೌಡರ ಕುಟುಂಬದವರು ನಮ್ಮ ಕ್ಷೇತ್ರದ ಕೆಲವು ಕಳ್ಳರ ಮಾತುಗಳನ್ನು ಕೇಳುತ್ತಾರೆ ಎಂದು ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದರು. 

ಕೆ.ಆರ್.ಪೇಟೆಯ ಕೆಲ ಕಳ್ಳರು ದೇವೇಗೌಡರ ಮನೆಯಲ್ಲಿ ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ  ಮಾಡುತ್ತಾರೆ.ಆದರೆ, ತಾವು ಗೌಡರ ಮನೆಯ ಚಪ್ಪಲಿ ಬಿಡುವ ಜಾಗದಲ್ಲಿ ನಿಲ್ಲಬೇಕು.ದೇವೇಗೌಡರ  ಕುಟುಂಬಕ್ಕೆ ಹಣ ನೀಡಿದ್ದೇನೆ ಎಂದು ತಾವೆಲ್ಲೂ ಹೇಳಿಲ್ಲ.ಆದರೆ ಎಚ್ ಡಿ ಕುಮಾರಸ್ವಾಮಿ ತಮ್ಮ  ಬಗ್ಗೆ ಸುಳ್ಳು ಆರೋಪ ಮಾಡ್ತಾರೆ.ಹಾಗಿದ್ದರೆ ಎಚ್ ಡಿ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ  ಎಂದು ನಾರಾಯಣ ಗೌಡ ಸವಾಲ್ ಹಾಕಿದರು. 

 ತಾವಿನ್ನೂ ಜೆಡಿಎಸ್ ಪಕ್ಷದಲ್ಲಿಯೇ ಇದ್ದೇವೆ.ಆದರೂ ಅವರು ತಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.ನಾನಾಗಿಯೇ ಪಕ್ಷದಿಂದ ಹೊರ ಬಂದಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ನಡೆದಿಲ್ಲವೆಂದು ಶಾಸಕ ಸ್ಥಾನಕ್ಕೆ  ರಾಜೀನಾಮೆ ಸಲ್ಲಿಸಿದ್ದೇನೆ.ತಮಗೆ ದೇವೇಗೌಡರ ಕುಟುಂಬದಲ್ಲಿ ಯಾರು ಹಿಂಸೆ  ಕೊಟ್ಟಿದ್ದಾರೆ ಅವರ ಬಗ್ಗೆ  ಮುಂದೆಯೇ ಮಾತನಾಡಿದ್ದೇನೆ. ದೇವೇಗೌಡರ ಅಳಿಯ ಡಾ.ಮಂಜುನಾಥ್  ಬಗ್ಗೆ ತಾವೆಲ್ಲಿಯೂ ಮಾತನಾಡಿಲ್ಲ.ಆದರೂ ಎಚ್ ಡಿ ಕುಮಾರಸ್ವಾಮಿ ತಮ್ಮನ್ನು ಕ್ರಿಮಿನಲ್ ಎಂದು ಕರೆದಿದ್ದಾರೆ.ಅದಕ್ಕೆ ಸೂಕ್ತ ಕಾಲದಲ್ಲಿ,ಸೂಕ್ತ ಸಂದರ್ಭ ಬಂದಾಗ ಉತ್ತರ ಕೊಡುತ್ತೇನೆ ಎಂದು ಚುನಾವಣೆ ದಿನಾಂಕ ಘೋಷಿಸಲಿ ಆಗ ಮಾತನಾಡುತ್ತೇನೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 

 ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಅಧಿಕಾರ ತಮಗೆ ಇದೆ. ಇನ್ನು ಜೆಡಿಎಸ್- ಕಾಂಗ್ರೆಸ್ನ 20 ಶಾಸಕರು ತಮ್ಮ  ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.ಉಪ ಚುನಾವಣೆಗೆ ಸ್ಪರ್ದಿಸುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ.ಬಿಜೆಪಿ ಸೇರುವ ಬಗ್ಗೆ ಇನ್ನೂ ನಿರ್ದಾರ ಕೈಗೊಂಡಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಯಂಕೃತ ಅಪರಾಧ ಮಾಡಿ  ನಮ್ಮತ್ತ ಬೊಟ್ಟು ಮಾಡಿ ತೋರಿಸ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ತಮ್ಮ ಕ್ಷೇತ್ರಕ್ಕೆ ಅನುದಾನ  ಕೊಡಲಿಲ್ಲ ಅವರು ಗುಡುಗಿದ್ದಾರೆ.