ಪ್ರವಾಹ ಸಂತಸ್ತ್ರರಿಗೆ ನೆರವಾಗುವಂತೆ ಕಿಚ್ಚ ಸುದೀಪ್ ಮನವಿ

 ಬೆಂಗಳೂರು, ಆ 8   ಎಡಬಿಡದೆ ಸುರಿಯುತ್ತಿರುವ ಮಳೆ ಹಾಗೂ ನದಿಗಳ ಪ್ರವಾಹದಿಂದ ರಾಜ್ಯದ 15 ಜಿಲ್ಲೆಗಳ ಜನರು ಕೆಂಗೆಟ್ಟಿದ್ದು, ಅವರ ನೆರವಿಗೆ ಕರ್ನಾಟಕದ ಜನತೆ ಧಾವಿಸಬೇಕು ಎಂದು ಸ್ಯಾಂಡಲ್ವುಡ್ ನಟ ಸುದೀಪ್ ಮನವಿ ಮಾಡಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರ ಕರ್ನಾಟಕದ ಎಲ್ಲ ಅಣೆಕಟ್ಟುಗಳಿಂದ ಬುಧವಾರ ಭಾರಿ ಪ್ರಮಾಣದಲ್ಲಿ ನೀರು ಬಿಡಲಾಗಿದ್ದು, ನದಿ ಪಾತ್ರದ ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. ಕೆಲವು ಕಡೆಗಳಲ್ಲಿ ನೀರಿನ ಮಧ್ಯೆ ಸಿಲುಕಿದವರನ್ನು ರಕ್ಷಿಸಲು ಸೇನೆ ಸಿಬ್ಬಂದಿಗೂ ಸಾಧ್ಯವಾಗದೆ ಇರುವ ಪ್ರಕರಣಗಳು ವರದಿಯಾಗಿವೆ.  ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಗ್ನಿಶಾಮಕ, ತುರ್ತು ಸೇವೆಗಳು, ಎಸ್ಡಿಆರ್ಎಫ್, ಎನ್ಡಿಆರ್ಎಫ್, ಸೇನಾ ಪಡೆ ಜಂಟಿ ಕಾರ್ಯಾಚರಣೆ ನಡೆಸಿದ್ದು ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗಿದೆ. ಅಲ್ಲದೇ, ಇನ್ನೂ ಅನೇಕ ಮಂದಿ ಪ್ರವಾಹಕ್ಕೆ ತತ್ತರಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಸ್ಯಾಂಡಲ್ವುಡ್ ನಟ ಸುದೀಪ್ ಅವರು ಇಂದು ಬೆಳಗ್ಗೆ ವಿಡಿಯೋ ಸಂದೇಶದ ಮೂಲಕ ಪ್ರವಾಹ ಪೀಡಿತ ಜಿಲ್ಲೆಗಳ ಜನರ ನೆರವಿಗೆ ಧಾವಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವಂತೆ ಅವರು ಕೇಳಿಕೊಂಡಿದ್ದಾರೆ. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಉತ್ತರ ಕರ್ನಾಟಕದಲ್ಲಿನ ಪ್ರವಾಹದ ವಿಡಿಯೋಗಳನ್ನು ನೋಡುತ್ತಿದ್ದೇವೆ ಎಂದಿರುವ ಅವರು ಪ್ರವಾಹ ಪ್ರದೇಶಗಳಿಗೆ ಸಮೀಪವಿರುವವರು ಅಲ್ಲಿ ನಡೆಯುತ್ತಿರುವ ಎಲ್ಲ ಅಂಶಗಳು ಹಾಗೂ ಅಲ್ಲಿನ ಜನತೆಗೆ ಅಗತ್ಯವಿರುವುವ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲಿನ ಪರಿಸ್ಥಿತಿ ಆಧರಿಸಿ ಅವರಿಗೆ ಅಗತ್ಯವಾದ ಸಹಾಯವನ್ನು ನಾವು ಮಾಡಲು ಮುಂದಾಗೋಣ. ಆ ಮೂಲಕ, ಸಂಕಷ್ಟದಲ್ಲಿರುವ ರಾಜ್ಯದ ಜನತೆಯ ನೆರವಿಗೆ ಧಾವಿಸೋಣ ಎಂದು ಸುದೀಪ್ ವೀಡಿಯೋ ಮೂಲಕ ತಿಳಿಸಿದ್ದಾರೆ.