ಕೋವಿಡ್-19: ಮಾಧ್ಯಮದವರಿಗೂ ವಿಶೇಷ ಆರ್ಥಿಕ ನಿಧಿ ಒದಗಿಸಲು ಮುಖ್ಯಮಂತ್ರಿಗೆ ಮನವಿ

ಬೆಂಗಳೂರು, ಮಾ.29, ಕೋವಿಡ್‌-19 ಸಂದರ್ಭದಲ್ಲಿ ಮಾಧ್ಯಮದವರಿಗೆ ವಿಶೇಷ ಆರ್ಥಿಕ  ನಿಧಿ ಒದಗಿಸಬೇಕು ಎಂದು ಬೆಂಗಳೂರು ಪ್ರೆಸ್‌ಕ್ಲಬ್‌ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದೆ.ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಪತ್ರ ಬರೆದಿರುವ ಪ್ರೆಸ್‌ಕ್ಲಬ್‌ ಅಧ್ಯಕ್ಷ ಸದಾಶಿವ ಶೆಣೈ, ಕೊರೊನಾ ಸೋಂಕಿನಿಂದ ನಾಡಿನ ಜನರ ಜೀವ ಕಾಪಾಡಬೇಕೆಂದು ಹಗಳಲಿರುಳು ಶ್ರಮಿಸುತ್ತಿರುವ ತಮ್ಮ ಜನಪರ ಕಾಳಜಿ ಪ್ರಶಂಸನೀಯ. ಕೊರೊನಾ ಸೋಂಕು ಹರಡದಂತೆ ಸಮರೋಪಾದಿಯಲ್ಲಿ ಜನತೆಯ ನೋವು ನಲಿವಿಗೆ ಸ್ಪಂದಿಸುತ್ತಿರುವ ಮತ್ತು ಜನಜೀವನ ನಡೆಸಲು ಪರಿಹಾರಕ್ಕೆ ರೂಪಿಸುತ್ತಿರುವ ಕಾರ್ಯಕ್ರಮಗಳು ತಮ್ಮ ಕರ್ತವ್ಯ ನಿಷ್ಠೆಗೆ ಧ್ಯೋತಕವಾಗಿದೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾಧ್ಯಮವನ್ನು ಅಗತ್ಯ ಸೇವೆ ಎಂದು ಪರಿಣಸಿರುವುದ್ದು, ಅದಕ್ಕೆ ತಾವು ಸಹಮತ ವ್ಯಕ್ತಪಡಿಸಿದಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.ಇಂತಹ ವಿಷೇಶ ಕಾಲಘಟ್ಟದಲ್ಲಿ ಈ ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ, ಪ್ಯಾರಮೆಡಿಕಲ್ ಸಿಬ್ಬಂದಿ ಮತ್ತು  ಪೊಲೀಸರಿಗೆ ಆರೋಗ್ಯ ಪರಿಹಾರ ನಿಧಿಯನ್ನು ತಮ್ಮ ಸರ್ಕಾರ ಘೋಷಿಸಿರುವುದು ಕೂಡ ಪ್ರಶಂಸನೀಯ. ಮಾಧ್ಯಮದವರು ಕೂಡ ತಮ್ಮ  ಜೀವ ಮತ್ತು ಪ್ರಾಣವನ್ನು ಒತ್ತೆಯಿಟ್ಟು ಈ ಕೊರೊನ ಮಹಾಮಾರಿಯ ವಿರುದ್ಧ  ಹೋರಾಡುತ್ತಿರುವುದರಿಂದ  ಅರೋಗ್ಯ ಪರಿಹಾರ ನಿಧಿಯನ್ನು ಮಾಧ್ಯಮದವರಿಗೂ ಕೂಡ  ವಿಸ್ತರಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.