ರಾಜ್ಯದಲ್ಲಿ 98 ಜನರಿಗೆ ಕೋವಿಡ್ -19 ಸೋಂಕು; ಒಂದೇ ದಿನದಲ್ಲಿ ಏಳು ಪ್ರಕರಣ

ಬೆಂಗಳೂರು, ಮಾ 31, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶತಕದ ಗಡಿ ತಲುಪಿದೆ. ನಿನ್ನೆ ಒಂದೇ ದಿನದಲ್ಲಿ ಏಳು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 98ಕ್ಕೇರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ. ಬೆಂಗಳೂರಿನಿಂದ ಬಳ್ಳಾರಿಯ ಹೊಸಪೇಟೆಗೆ ಪ್ರಯಾಣಿಸಿದ್ದ ಒಂದು ಕುಟುಂಬದ ಸದಸ್ಯರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಕುಟುಂಬದ 52 ವರ್ಷದ ಪುರುಷ, 26 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಇವರು ಮಾ. 16ರಂದು ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದರು.
ಅಲ್ಲದೆ, 59ನೇ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ 40 ವರ್ಷದ ಪುರುಷನಿಗೆ ಸೊಂಕು ಪತ್ತೆಯಾಗಿದೆ. ಮಾ. 22ರಂದು ಅಮೆರಿಕದಿಂದ ಆಗಮಿಸಿದ್ದ 19 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ 40 ವರ್ಷದ ಮಹಿಳೆಯಲ್ಲಿ ಕೂಡ ಸೋಂಕು ದೃಢಪಟ್ಟಿದೆ. ಮೈಸೂರಿನಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದು, 35  ಹಾಗೂ 41 ವರ್ಷದ ಪುರುಷರಲ್ಲಿ ಸೋಂಕಿರುವುದು ಪತ್ತೆಯಾಗಿದೆ. ದಕ್ಷಿಣ ಕನ್ನಡ 37 ವರ್ಷದ ಪುರುಷ ಹಾಗೂ ಉತ್ತರಕನ್ನಡದ ಬಟ್ಕಳದ 26 ವರ್ಷದ  ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಎಲ್ಲರನ್ನೂ ಪ್ರತ್ಯೇಕಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.