ಕೋವಿಡ್ -19 ವರದಿ ನೆಗೆಟಿವ್ ಬಂದರೂ ಇಲ್ಲ ಬಿಡುಗಡೆ ಭಾಗ್ಯ !

ಬೆಂಗಳೂರು,  ಮೇ 28, ವಿದೇಶದಿಂದ ಬೆಂಗಳೂರಿಗೆ ಬಂದು ಕ್ವಾರಂಟೈನ್ ಆದವರ ವರದಿ ನೆಗೆಟಿವ್  ಬಂದರೂ, ಅವರಿಗೆ ಕ್ವಾರಂಟೈನ್ ನಿಂದ ಬಿಡುಗಡೆಯಾಗುವ ಭಾಗ್ಯ ಮಾತ್ರ ದೊರೆತಿಲ್ಲ.
ಹೀಗಾಗಿ‌ ನಗರದ ಮಾರತ್ ಹಳ್ಳಿಯ ಫ್ಯಾಬ್ ಎಕ್ಸ್ ಪ್ರೆಸ್ ಬಾಲಿ ಹೊಟೇಲ್ ನಲ್ಲಿರುವವರು ಸರ್ಕಾರದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ನಾವು ಮೇ 19ರಂದು ಮಲೇಷ್ಯಾ ದಿಂದ ಬೆಂಗಳೂರಿಗೆ ಬಂದಿದ್ದು, ಮಲೇಶ್ಯಾದಲ್ಲಿಯೇ ಎರಡು ತಿಂಗಳು ಕ್ವಾರಂಟೈನ್‌ ಮುಗಿಸಿದ್ದೇವೆ. ಅಲ್ಲದೇ, ಅಲ್ಲಿ ಕೊರೊನಾ ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಬಂದ ನಂತರ ಇಲ್ಲಿಗೆ ಬಂದಿದ್ದೇವೆ.
ಇಲ್ಲಿಯೂ  ಕೂಡ ಏಳು ದಿನಗಳ ಕಾಲ ಕ್ವಾರಂಟೈನ್ ಮುಗಿಸಿದ್ದೇವೆ. ಅಲ್ಲದೇ, ಇಲ್ಲಿಯೂ ಕೂಡ  ಕೋವಿಡ್-19 ಪರೀಕ್ಷೆಯಲ್ಲಿ ನೆಗೆಟಿವ್  ಬಂದಿದೆ. ಉಳಿದ ಏಳು ದಿನ ಮನೆಯಲ್ಲೇ  ಕ್ವಾರಂಟೈನ್ ಇರುತ್ತೇವೆ. ದಯವಿಟ್ಟು ತಮ್ಮನ್ನು ಕ್ವಾರಂಟೈನ್ ನಿಂದ ಮುಕ್ತಗೊಳಿಸಿ ಎಂದು  ಅವರು ಮನವಿ ಮಾಡಿಕೊಂಡಿದ್ದಾರೆ.ಇನ್ನು, ತಾವು ತಂಗಿರುವ ಹೊಟೇಲ್ ದರ ದುಬಾರಿಯಾಗಿದ್ದು, ಅದನ್ನು ಭರಿಸುವುದು ಕಷ್ಟವಾಗಿದೆ. ಬೇರೆ ರಾಜ್ಯಗಳಲ್ಲಿ 14 ಸಾವಿರ ರೂ.ವಿಮಾನ ಟೆಕೇಟ್ ದರ ಪಡೆದಿದ್ದರೆ. ನಮ್ಮಲ್ಲಿ ಮಾತ್ರ 35  ಸಾವಿರ ರೂ. ಪಡೆಯಲಾಗಿದೆ ಎಂದು  ಆರೋಪಿಸಿದ ಅವರು, ಫ್ಲೈಟ್  ಚಾರ್ಜ್ ಗೆ ತಕರಾರಿಲ್ಲ ಆದರೆ, ಹೊಟೆಲ್ ದರ ಪಾವತಿಸುವುದು ಕಷ್ಟವಾಗಿದೆ. ಆದ್ದರಿಂದ  ಉಳಿದ ಏಳು ದಿನ ಮನೆಯಲ್ಲೇ ಕ್ವಾರಂಟೈನ್ ಇರುತ್ತೇವೆ. ನಮಗೆ ಮನೆಗೆ ಹೋಗಲು ಸರ್ಕಾರ  ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.