ಬೆಂಗಳೂರು, ಏ.2, ದೇಶಾದ್ಯಂತ ಕೋವಿಡ್- 19 ವೈರಸ್ ಹರಡುವುದನ್ನು ತಡೆಗಟ್ಟಲು ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಆಡಳಿತ ಇಲಾಖೆಗಳು ಮುಂದುವರೆದ ಯೋಜನೆಗಳಿಗೆ ಹಾಗೂ ಹೊಸ ಯೋಜನೆಗಳಿಗೆ ಸಂಬಂಧಿಸಿದಂತೆ ಆದೇಶವನ್ನು ಹೊರಡಿಸದಂತೆ ರಾಜ್ಯ ಹಣಕಾಸು ಇಲಾಖೆ ಸೂಚಿಸಿದೆ.ಒಂದು ವೇಳೆ ಈಗಾಗಲೇ ಯೋಜನೆಗಳಿಗೆ ಸಂಬಂಧಿಸಿದಂತೆ ಆದೇಶವನ್ನು ಹೊರಡಿಸಿದ್ದರೆ ಕೂಡಲೇ ಹಿಂದಕ್ಕೆ ಪಡೆಯುವಂತೆ ಹಣಕಾಸು ಇಲಾಖೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ.ಆಡಳಿತ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಈ ಸೂಚನೆ ನೀಡಲಾಗಿದೆ.
ಪ್ರಸಕ್ತ 2020 -21 ನೇ ಸಾಲಿನ ತ್ರೈಮಾಸಿಕ ಕಂತುಗಳ ಬಿಡುಗಡೆಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಮಾಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಸದ್ಯದಲ್ಲಿಯೇ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಆದೇಶವನ್ನು ಹೊರಡಿಸಲಾಗುತ್ತದೆ. ಅಲ್ಲಿಯವರೆಗೂ ಯಾವುದೇ ಹೊಸ ಯೋಜನೆಗಳಿಗೆ, ಮುಂದುವರೆದ ಯೋಜನೆಗಳಿಗೆ ಸಂಬಂಧಿಸಿದ ಆದೇಶವನ್ನು ಹೊರಡಿಸದಂತೆ ಸೂಚಿಸಲಾಗಿದೆ.ಕೊರೋನಾ ವೈರಸ್ ಹರಡುವುದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏಪ್ರಿಲ್ ಹದಿನಾಲ್ಕರ ವರೆಗೂ ಲಾಕ್ ಡೌನ್ ಮಾಡಿರುವುದರಿಂದ ಪ್ರಸಕ್ತ ಆರ್ಥಿಕ ಸಾಲಿಗೆ ಸಂಬಂಧಿಸಿದ ಯೋಜನೆಗಳಿಗೆ ತಾತ್ಕಾಲಿಕ ಹಿನ್ನಡೆಯಾಗಿದೆ. ಆರ್ಥಿಕ ವರ್ಷಾರಂಭದ ಮೊದಲ ದಿನವಾದ ಏ.1 ರಿಂದಲೇ ಹಲವು ಆದೇಶಗಳು ಜಾರಿಯಾಗಬೇಕಿತ್ತು. ಬಜೆಟ್ ಪ್ರಸ್ತಾಪಿತ ಯೋಜನೆ ಹಾಗೂ ಕಾರ್ಯಕ್ರಮಗಳಿಗೂ ಚಾಲನೆ ದೊರೆಯಬೇಕಿತ್ತು. ಆದರೆ, ಕೊರೋನಾ ವೇರಸ್ ಕರಿನೆರಳಿನಿಂದಾಗಿ ಸರ್ಕಾರದ ಕಾರ್ಯಕ್ರಮಗಳಿಗೂ ಹಿನ್ನಡೆಯುಂಟಾಗುವಂತಾಗಿದೆ.