ಲಕ್ನೋ, ಮಾರ್ಚ್ 23 , ಉತ್ತರ ಪ್ರದೇಶದಲ್ಲಿ ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ, ಸಿಎಎ / ಎನ್‌ಪಿಆರ್ / ಎನ್‌ಸಿಆರ್ ವಿರುದ್ಧದ ಪ್ರತಿಭಟನೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಸೋಮವಾರ ಅಲ್ಪಸಂಖ್ಯಾತ ಸಮುದಾಯ ತಿಳಿಸಿದೆ. ಮುಸ್ಲಿಂ ಧರ್ಮಗುರುಗಳು ಮತ್ತು ವಿವಿಧ ಸಂಘಟನೆಗಳ ಮನವಿಯ ನಂತರ, ಮಹಿಳಾ ಪ್ರತಿಭಟನಕಾರರು 66 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು. ಮಹಿಳೆಯರು ಕೊರೊನಾವೈರಸ್ ಭೀತಿಯಿಂದಾಗಿ ಪ್ರತಿಭಟನೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಲಕ್ನೋ ಪೊಲೀಸ್ ಆಯುಕ್ತ (ಸಿಪಿ) ಸುಜೀತ್ ಪಾಂಡೆ ತಿಳಿಸಿದ್ದಾರೆ.ಸದ್ಯಕ್ಕೆ ಪ್ರತಿಭಟನೆಯನ್ನು ಸ್ಥಗಿತಗೊಳಿಸುತ್ತೇವೆ, ಆದರೆ ಕೊರೋನವೈರಸ್‌ನ ಹಾವಳಿ ಕೊನೆಗೊಂಡ ನಂತರ ಮತ್ತೆ ತಮ್ಮ ಪ್ರತಿಭಟನೆಯನ್ನು ಪ್ರಾರಂಭಿಸುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.ಸಂಕೇತವಾಗಿ, ಮಹಿಳೆಯರು ತಮ್ಮ 'ದುಪಟ್ಟಾ'ಗಳನ್ನು ಸ್ಥಳದಲ್ಲಿಯೇ ಕಟ್ಟಿ ತಮ್ಮ ಹಾಸಿಗೆಗಳನ್ನು ಮತ್ತು ಇತರ ವಸ್ತುಗಳನ್ನು ಸ್ಥಳದಲ್ಲಿಯೇ ಇಟ್ಟಿದ್ದಾರೆ ಎಂದು ಅವರು ಹೇಳಿದರು.
ಸ್ಥಳದಲ್ಲಿ ಇಟ್ಟಿರುವ ತಮ್ಮ ವಸ್ತುಗಳನ್ನು ರಕ್ಷಿಸುವಂತೆ ಪೊಲೀಸರಿಗೆ ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ.ಕೊರೋನವೈರಸ್ ಭೀತಿಯಿಂದ ಪೊಲೀಸರು ಈ ಮಹಿಳೆಯರನ್ನು ಅಲ್ಲಿಂದ ತೆರವುಗೊಳಿಸಲು ಪ್ರಯತ್ನಿಸಿದ ನಂತರ ಕಳೆದ ಒಂದು ವಾರದಿಂದ ಉದ್ವಿಗ್ನತೆ ಹೆಚ್ಚಾಗಿತ್ತು. ಮಾತ್ರವಲ್ಲ ಸ್ಥಳದಿಂದ ಕದಲುವುದಿಲ್ಲ ಎಂದು ಮಹಿಳೆಯರು ಪಟ್ಟು ಹಿಡಿದಿದ್ದರು. ಆದರೆ ಇದೀಗ ಧರ್ಮಗುರುಗಳ ಸೂಚನೆಯಂತೆ ಮಹಿಳೆಯರು ತಮ್ಮ ಪ್ರತಿಭಟನೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದಾರೆ. ಜನವರಿ 17ರಿಂದ ಗಾಂಟಗರ್ ಪ್ರದೇಶದಲ್ಲಿ ಈ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರು.
ಈ ಮಧ್ಯೆ, ಲಕ್ನೋ, ನೋಯ್ಡಾ ಮತ್ತು ಗಾಜಿಯಾಬಾದ್ ಸೇರಿದಂತೆ ಉತ್ತರ ಪ್ರದೇಶದ 16 ಜಿಲ್ಲೆಗಳು ಇಂದು ಬೆಳಿಗ್ಗೆಯಿಂದ ಸಂಪೂರ್ಣ ಲಾಕ್ ಡೌನ್ ಆಗಿದ್ದು, ಬುಧವಾರದವರೆಗೆ ಮುಂದುವರಿಯುತ್ತದೆ. ಆದಾಗ್ಯೂ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.