ಬೆಂಗಳೂರು, ಮೇ 8,ಕೊವಿಡ್-19 ಹಿನ್ನೆಲೆಯಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಸಾಮಾನ್ಯ ಕಾರ್ಯಾಚರಣೆಯನ್ನು ಹಿಂದೂಸ್ತಾನ್ ವಿಮಾನ ಕಾರ್ಖಾನೆ(ಎಚ್‍ಎಎಲ್) ಪುನರಾರಂಭಿಸಿದ್ದು, ದೇಶದ ವಿವಿಧ ಘಟಕಗಳಲ್ಲಿನ ತನ್ನ ನೌಕರರ ಸುರಕ್ಷತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಜಾರಿಗೊಳಿಸಿದೆ. ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳಂತೆ ಸಂಸ್ಥೆ ಕ್ರಮಗಳನ್ನು ತೆಗೆದುಕೊಂಡಿರುವುದಲ್ಲದೆ, ಎಚ್‍ಎಎಲ್ ಅಭಿವೃದ್ಧಿ ಪಡಿಸಿರುವ ಪೆಡೆಲ್ ಆಧಾರಿತ(ಕೈ ಬಳಕೆ ಮಾಡದೆ) ಸ್ಯಾನಿಟೈಜರ್ ಸಾಧನದಂತಹ ಕೆಲ ಆವಿಷ್ಕಾರಗಳನ್ನೂ ಅಳವಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪಾಳಿಗಳ ನಡುವೆ ಮತ್ತು ಪಾಳಿಗಳ ಅವಧಿಯಲ್ಲಿ ಆಗಿಂದಾಗ್ಗೆ ಕೆಲಸದ ಜಾಗವನ್ನು ಶುದ್ಧಗೊಳಿಸುವುದು, ಹಾಜರಾತಿಗೆ ಬಯೋಮೆಟ್ರಿಕ್ ಸಾಧನ ಬಳಸದಿರುವುದು, ಪಾಳಿಗಳಲ್ಲಿ ಬದಲಾವಣೆ ಮುಂತಾದ ಕಾರ್ಯಾಚರಣೆ ನಿಯಮಾಳಿಗಳನ್ನು ಜಾರಿಗೆ ತರಲಾಗಿದೆ ಎಂದು ಸಂಸ್ಥೆ ಹೇಳಿದೆ. ಮುಖಗವಸುಗಳನ್ನು ನೌಕರರಿಗೆ ವಿತರಿಸಲಾಗಿದ್ದು, ಕಾರ್ಖಾನೆಯ ಉಪಕರಣಗಳಿಗೆ ಸೋಂಕು ನಿರೋಧಕ ಸಿಂಪಡಣೆ ಮಾಡಲಾಗಿದೆ. ಪ್ರವೇಶ ದ್ವಾರಗಳಲ್ಲಿ ಮತ್ತು ಕೆಲಸ ಮಾಡುವ ಸಾಮಾನ್ಯ ಸ್ಥಳಗಳಲ್ಲಿ ಸ್ಯಾನಿಟೈಜರ್ ಇರಿಸಲಾಗಿದೆ. ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಕಚೇರಿ ಕೆಲಸಗಳು ಸೇರಿದಂತೆ ಯಾವುದೇ ಸಂವಾದಕ್ಕೆ ಆನ್‍ಲೈನ್ ಬಳಸಿಕೊಳ್ಳಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.