ಬೆಂಗಳೂರು, ಮಾರ್ಚ್ 30 ,ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಔಷಧ ಉತ್ಪಾದನಾ ಘಟಕಗಳು ಸೇರಿದಂತೆ ಸಂಪೂರ್ಣ ಆರೋಗ್ಯ ಕ್ಷೇತ್ರವನ್ನು ಲಾಕ್‌ಡೌನ್‌ನಿಂದ ಮುಕ್ತಗೊಳಿಸಲಾಗಿದೆ ಎಂದು ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಜಾವೈದ್ ಅಖ್ತರ್ ಸೋಮವಾರ ಇಲ್ಲಿ ಸ್ಪಷ್ಟಪಡಿಸಿದ್ದಾರೆ.ಭಾರತೀಯ ವೈದ್ಯಕೀಯ ಸಂಘ ಎಚ್ಚರಿಕೆ-ಸಲಹೆಯನ್ನು ಹೊರಡಿಸಿ, ತಾನು ಲಾಕ್‌ಡೌನ್‌ನಿಂದ ವಿನಾಯಿತಿ ಪಡೆದಿರುವುದಾಗಿ ಹೇಳಿದೆ. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ವಿಶೇಷ ಕೊವಿದ್-19 ಆಸ್ಪತ್ರೆಯಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿರುವುದಾಗಿ ಸೋಮವಾರ ಹೊರಡಿಸಲಾದ ಪ್ರಕಟಣೆ ತಿಳಿಸಿದೆ.
‘ಇದು ತ್ವರಿತ ಚಿಕಿತ್ಸೆಯ ಯೋಜನೆಯಾಗಿದೆ. ಕೊವಿದ್-19 ಚಿಕಿತ್ಸೆಗಾಗಿ ಕೆಲ ಆಸ್ಪತ್ರೆಗಳನ್ನು ಪ್ರತ್ಯೇಕವಾಗಿ ಮೀಸಲಿರಿಸಲಾಗಿದೆ. ಇದರಿಂದ ಇತರ ರೋಗಿಗಳೊಂದಿಗೆ ಬೆರೆಯಲು ಅವಕಾಶವಿರುವುದಿಲ್ಲ. ಸೋಂಕಿನ ಅಪಾಯವನ್ನು ತಗ್ಗಿಸಲು ಕೆಲವು ಕಟ್ಟಡಗಳು ಇಲ್ಲವೇ ಇತರ ಕಟ್ಟಡಗಳನ್ನು ಪ್ರತ್ಯೇಕರುವ ಆಸ್ಪತ್ರೆಗಳನ್ನು ಆರಂಭಿಸುತ್ತಿದ್ದೇವೆ.’ ಎಂದು ಅಖ್ತರ್ ಹೇಳಿದ್ದಾರೆ.
ಸೋಂಕಿನ ಚಿಕಿತ್ಸೆಗೆ ಇದುವರೆಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ 350 ಹಾಸಿಗೆಗಳನ್ನು ಮತ್ತು ಬೌರಿಂಗ್ ಆಸ್ಪತ್ರೆಯಲ್ಲಿ 300 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಕೊವಿದ್-19 ಸಂಸ್ಕರಣೆಗೆ ಸಂಬಂಧಿಸಿದ ಎಲ್ಲಾ ಜೈವಿಕ ವೈದ್ಯಕೀಯ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು ಮತ್ತು ತ್ಯಾಜ್ಯವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳ ಪ್ರಕಾರ ಸಂಗ್ರಹಿಸಿ, ಬೇರ್ಪಡಿಸಿ, ಲೇಬಲ್ ಮಾಡಿ ಪ್ಯಾಕೇಜ್ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಸಾಮಾನ್ಯ ಜೈವಿಕವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಕೇಂದ್ರದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ. ಇಂದಿರಾ ಕ್ಯಾಂಟೀನ್‌ಗಳಲ್ಲಿ ದಿನಗೂಲಿ ಕಾರ್ಮಿಕರು ಮತ್ತು ಬಡವರಿಗೆ ಉಚಿತ ಆಹಾರವನ್ನು ಒದಗಿಸುವುದಾಗಿ ಬಿಬಿಎಂಪಿ ಹೇಳಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನದ ಮತ್ತು ರಾತ್ರಿಯ ಊಟ ಬೆಂಗಳೂರಿನಾದ್ಯಂತದ ಕ್ಯಾಂಟೀನ್‌ಗಳಲ್ಲಿ ಲಭ್ಯವಿರುತ್ತದೆ. ಎಂದು ಬಿಬಿಎಂಪಿ ಸಾರ್ವಜನಿಕ ನೋಟಿಸ್ ಹೊರಡಿಸಿದೆ. ರಾಜ್ಯ ಸರ್ಕಾರ 155214 ಸಂಖ್ಯೆಯ ಸಹಾಯವಾಣಿಯನ್ನು ಆರಂಭಿಸಿದೆ. ಈ ಸಂಖ್ಯೆಗೆ ಕರೆ ಮಾಡುವವರನ್ನು ಹತ್ತಿರದ ಆಹಾರ ವಿತರಣಾ ಸ್ಥಳಕ್ಕೆ ಸೂಚಿಸಲಾಗುವುದು. ಕೊವಿದ್-19 ಸೋಂಕಿಗೆ ಸಂಬಂಧಿಸಿದ ಎಲ್ಲ ಮಾಹಿತಿಗೆ ಸರ್ಕಾರ covid19.karnataka. gov.in. ವೆಬ್‍ಸೈಟ್ ಆರಂಭಿಸಿದೆ.