ಕೋವಿಡ್-19: ಬೆಂಗಳೂರು ನಗರದ ಸಚಿವರೊಂದಿಗೆ ಮುಖ್ಯಮಂತ್ರಿ ಸಭೆ; ಪಡಿತರ ವಿತರಣೆಗೆ ಕ್ರಮಕೈಗೊಳ್ಳಲು ಸೂಚನೆ

ಬೆಂಗಳೂರು, ಏ.3,ಕೋವಿಡ್ -19 ತಡೆಗಟ್ಟುವ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದಲ್ಲಿಂದು ಬೆಂಗಳೂರು ನಗರದ ಸಚಿವರೊಂದಿಗೆ ನಡೆಸಿದರು.ರಾಜ್ಯದಲ್ಲಿ ವರದಿಯಾದ ಕೋವಿಡ್ 19 ಪ್ರಕರಣಗಳಲ್ಲಿ ಅರ್ಧದಷ್ಟು ಬೆಂಗಳೂರಿನಲ್ಲಿ ಇವೆ. ಈ  ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ  ಬೆಂಗಳೂರು ನಗರದ ಸಚಿವರೊಂದಿಗೆ ಸಭೆ ನಡೆಸಲಾಯಿತು.ಇಂದು ನಡೆದ ಸಭೆಯಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ಮತ್ತೆ ಬೆಂಗಳೂರಿನ ಸಚಿವರು ಹಾಗೂ ಶಾಸಕರೊಂದಿಗೆ ಸಭೆ ಕರೆಯಲು ತೀರ್ಮಾನಿಸಲಾಯಿತು. ನಗರದ ಶಾಸಕರು, ಪಾಲಿಕೆ ಸದಸ್ಯರ ಸಹಕಾರದೊಂದಿಗೆ ಬಡವರು, ಕಾರ್ಮಿಕರಿಗೆ ಕೇಂದ್ರ ಹಾಗೂ  ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಪಡಿತರ ವಿತರಣೆ ಸಮರ್ಪಕವಾಗಿ ಆಗುವಂತೆ ಖಾತರಿ  ಪಡಿಸಿಕೊಳ್ಳಲು ಮುಖ್ಯಮಂತ್ರಿ ಸೂಚಿಸಿದರು. ಸಾಮಾಜಿಕ ಭದ್ರತಾ ಯೋಜನೆಗಳಡಿ  ಎರಡು ತಿಂಗಳ ಪಿಂಚಣಿಗಳನ್ನು ಮುಂಗಡವಾಗಿ ವಿತರಿಸಲಾಗುತ್ತಿದೆ. ಕಟ್ಟಡ ಕಾರ್ಮಿಕರಿಗೆ  ನೀಡುವ ನೆರವಿನ ಮೊತ್ತವನ್ನು 2 ಸಾವಿರಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಇದರೊಂದಿಗೆ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಇರುವ ಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು ಮತ್ತಿತರ ಮೂಲಸೌಕರ್ಯ ಒದಗಿಸಲು ನಿರ್ಧರಿಸಲಾಯಿತು.ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹೆಚ್ಚಿನ ನೆರವು ಪಡೆಯಲು ನಗರದ ದಾನಿಗಳ ಮನವೊಲಿಸಲು ಸೂಚನೆ ನೀಡಲಾಯಿತು. ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್. ಅಶೋಕ, ಗೃಹ ಸಚಿವ ಬಸವರಾಜ  ಬೊಮ್ಮಾಯಿ, ವಸತಿ ಸಚಿವ ವಿ. ಸೋಮಣ್ಣ, ಶಿಕ್ಷಣ ಸಚಿವ ಸುರೇಶ್ ಕುಮಾರ್, ಆಹಾರ ಮತ್ತು  ನಾಗರಿಕ ಪೂರೈಕೆ ಸಚಿವ ಕೆ. ಗೋಪಾಲಯ್ಯ, ನಗರಾಭಿವೃದ್ಧಿ ಸಚಿವ ಬಿ..ಎ. ಬಸವರಾಜ, ಸಹಕಾರ  ಸಚಿವ ಎಸ್.ಟಿ.. ಸೋಮಶೇಖರ್, ತೋಟಗಾರಿಕೆ ಮತ್ತು ಪೌರಾಡಳಿತ ಸಚಿವ ನಾರಾಯಣಗೌಡ, ಕಾರ್ಮಿಕ  ಸಚಿವ ಶಿವರಾಮ ಹೆಬ್ಬಾರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.  ವಿಶ್ವನಾಥ್,  ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ..ಎಂ. ವಿಜಯಭಾಸ್ಕರ್ ಮತ್ತು ಸರ್ಕಾರದ  ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.