ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಜ್ಞಾನ ಅಗತ್ಯ

Knowledge of English is essential in a competitive world

ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್ ಜ್ಞಾನ ಅಗತ್ಯ  

 ಹೂವಿನಹಡಗಲಿ 29 : ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸುಗಳಿಸಲು ಇಂಗ್ಲಿಷ್ ಜ್ಞಾನ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗಾಗಿ ಇಂಗ್ಲಿಷ್ ಜ್ಞಾನ ಸಂಪಾದಿಸಿಕೊಳ್ಳಿ ಎಂದು ಪ್ರಾಚಾರ್ಯ ಪ್ರಕಾಶ್ ಕಲ್ಲನಗೌಡ್ರಹೇಳಿದರು.ಬುಧವಾರ ತಾಲೂಕಿನ ಮಾಗಳ ಗ್ರಾಮದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ  ಹೊಳಲು, ಮಾಗಳ ಮತ್ತು ಹಿರೇಹಡಗಲಿ ಸರಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ಇಂಗ್ಲಿಷ್ ಪರೀಕ್ಷಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ  ಪ್ರಾಚಾರ್ಯ ಬಿ. ಈಶ್ವರ​‍್ಪ, ಗ್ರಾಮೀಣ ಕಾಲೇಜುಗಳಲ್ಲಿನ ಫಲಿತಾಂಶ ಸುಧಾರಣೆಯ ಕ್ರಮವಾಗಿ ಈ ಇಂಗ್ಲಿಷ್ ಬೂಸ್ಟರ್ ಕಾರ್ಯಾಗಾರ ಆಯೋಜಿಸಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಉಪನ್ಯಾಸಕ ಚಾಂದ್ ಪೀರ್ ಮಾತನಾಡಿದರು. ಉಪನ್ಯಾಸಕ ಎಂ. ರೇವಣಸಿದ್ಧಪ್ಪ, ಪರಶುರಾಮ ನಾಗೋಜಿ, ಕೆ. ಶಬೀನ, ಸುಮಾ ಶಾಕಾರದ, ತಾರಾಸಿಂಗ್, ಮೆಹಬೂಬ್ ಸಾಬ್, ಪಂಪಣ್ಣ, ರಾಮಣ್ಣ ಮತ್ತು ಹೊಳಲು, ಹಿರೇಹಡಗಲಿ ಹಾಗೂ ಮಾಗಳ ಸರಕಾರಿ ಪದವಿಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಶೇಷ ಬಸ್ ವ್ಯವಸ್ಥೆ  ಗ್ರಾಮಸ್ಥರ ಕಾಳಜಿಗೆ ಶ್ಲಾಘನೆಇಂಗ್ಲಿಷ್ ಬೂಸ್ಟರ್ ಕಾರ್ಯಾಗಾರದಲ್ಲಿ ಭಾಗವಹಿಸಲು ಆಗಮಿಸಲಿದ್ದ ಹೊಳಲು ಹಾಗೂ ಹಿರೇಹಡಗಲಿ ಸರಕಾರಿ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾಗಳಕ್ಕೆ ನೇರ ಬಸ್ ಸೌಲಭ್ಯ ಇರಲಿಲ್ಲ. ಇದನ್ನು ಅರಿತ ಮಾಗಳ ಗ್ರಾಮಸ್ಥರು ಹೂವಿನಹಡಗಲಿ ಘಟಕ ವ್ಯವಸ್ಥಾಪಕರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಹೂವಿನಹಡಗಲಿ ಘಟಕ ವ್ಯವಸ್ಥಾಪಕ ವೆಂಕಟಾಚಲಪತಿ, ಬೆಳಗ್ಗೆ ಹಾಗೂ ಸಂಜೆ ಕಾರ್ಯಾಗಾರದ ಸಮಯಕ್ಕೆ ಬಸ್ ಕಳಿಸಲು ಸೂಚಿಸಿ, ಎರಡೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಲುಪಲು ನೆರವಾದರು. ಮಾಗಳ ಗ್ರಾಮಸ್ಥರು ಹಾಗೂ ಘಟಕ ವ್ಯವಸ್ಥಾಪಕರ ಈ ಕಾಳಜಿಯನ್ನು ತಾಲೂಕಿನ ಶಿಕ್ಷಣ ಪ್ರೇಮಿಗಳು ಕೊಂಡಾಡಿದ್ದಾರೆ.ನಮ್ಮೂರಿನ ಕಾಲೇಜಿನಲ್ಲಿ ಜರುಗುವ ಕಾರ್ಯಾಗಾರಕ್ಕೆ ತಲುಪಲು ಬೇರೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಬಸ್ ಸಲುವಾಗಿ ಮನವಿ ಸಲ್ಲಿಸಿದ್ದೆವು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ನಮ್ಮ ಶ್ರಮ ಸಾರ್ಥಕ ಎಂದು ಮಾಗಳದ ಶಿಕ್ಷಣಪ್ರೇಮಿ ವಿಶ್ವಪಾಲ್ ಕೆಂಪಕಟ್ಟಿ ತಿಳಿಸಿದರು.