ಅಯ್ಯರ್-ರಾಹುಲ್ ಅಬ್ಬರಕ್ಕೆ ಕಿವೀಸ್ ಉಡೀಸ್ : ಭಾರತಕ್ಕೆ 6 ವಿಕೆಟ್ ಭರ್ಜರಿ ಜಯ

ಆಕ್ಲೆಂಡ್, ಜ 24 :      ಇಲ್ಲಿನ ಈಡನ್ ಪಾರ್ಕ್ ಅಂಗಳದಲ್ಲಿ ಸೇರಿದ್ದ ಸಾವಿರಾರು ಕ್ರಿಕೆಟ್ ಅಭಿಮಾನಿಗಳಿಗೆ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ರನ್ ಹೊಳೆ ಹರಿಸುವ ಮೂಲಕ ಭರ್ಜರಿ ರಸದೌತಣ ಉಣಬಡಿಸಿದವು. ಆದರೆ, ಒಂದು ಕೈ ಮೇಲುಗೈ ಸಾಧಿಸಿದ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಆರು ವಿಕೆಟ್ ಗಳಿಂದ ಪ್ರಬುದ್ಧ ಗೆಲುವು ಸಾಧಿಸಿತು. 

ನ್ಯೂಜಿಲೆಂಡ್ ನೀಡಿದ 204 ರನ್ ಗುರಿ ಹಿಂಬಾಲಿಸಿದ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ (56 ರನ್) ಹಾಗೂ ಶ್ರೇಯಸ್ ಅಯ್ಯರ್ (ಔಟಾಗದೆ 58 ರನ್) ಪಾತ್ರ ಮಹತ್ತರವಾಗಿತ್ತು. 19 ಓವರ್ ಗಳಲ್ಲಿ ಭಾರತ ನಾಲ್ಕು ವಿಕೆಟ್ ಕಳೆದುಕೊಂಡು 204 ರನ್ ಗಳಿಸಿ ಗೆಲುವಿನ ತೋರಣ ಕಟ್ಟಿತು. ಆ ಮೂಲಕ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿ 1-0 ಮುನ್ನಡೆ ಪಡೆಯಿತು. ಅತಿ ಹೆಚ್ಚು ಬಾರಿ 200 ರನ್ ಗುರಿ ಮುಟ್ಟಿದ ವಿಶ್ವದ ಮೊದಲ ತಂಡ ಎಂಬ ಹಿರಿಮೆಗೆ ಭಾರತ ಭಾಜನವಾಯಿತು.

ಚುಟುಕು ಕ್ರಿಕೆಟ್ ನಲ್ಲಿ ತಮ್ಮ ಅದ್ಭುತ ಲಯದಲ್ಲಿರುವ ಕೆ.ಎಲ್ ರಾಹುಲ್, ಜತೆಗಾರ ರೋಹಿತ್ ಶರ್ಮಾ ಬೇಗ ವಿಕೆಟ್ ಒಪ್ಪಿಸಿದರೂ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಸ್ಫೋಟಕ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ರಾಹುಲ್ ಹಾಗೂ ಕೊಹ್ಲಿ ಜೋಡಿ ಎರಡನೇ ವಿಕೆಟ್ ಗೆ 99 ರನ್ ದಾಖಲಿಸಿತ್ತು. ಆರನೇ ಓವರ್ ನಲ್ಲಿ ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಂಡ ರಾಹುಲ್, ಕೇವಲ 27 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಯೊಂದಿಗೆ 56 ರನ್ ಸಿಡಿಸಿದರು. ನಾಯಕ ವಿರಾಟ್ ಕೊಹ್ಲಿ ಕೂಡ ನಿರಾಸೆ ಮೂಡಿಸಲೇ ಇಲ್ಲ. 32 ಎಸೆತಗಳಲ್ಲಿ 45 ರನ್ ಚಚ್ಚಿ ಔಟಾದರು.

13.2 ಓವರ್ ಗಳಿಗೆ ಶಿವಂ ದುಬೆ ವಿಕೆಟ್ ಉರುಳುತ್ತಿದ್ದಂತೆ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಭಾರತಕ್ಕೆ 40 ಎಸೆತಗಳಲ್ಲಿ 62 ರನ್ ಅಗತ್ಯವಿತ್ತು. ಈ ವೇಳೆ ಜತೆಯಾದ ಶ್ರೇಯಸ್ ಅಯ್ಯರ್ ಹಾಗೂ ಮನೀಷ್ ಪಾಂಡೆ ಜೋಡಿ ಎಚ್ಚರಿಕೆಯ ಆಟವಾಡಿತು.

ಅಬ್ಬರದ ಬ್ಯಾಟಿಂಗ್ ಮಾಡಿದ ಶ್ರೇಯಸ್ ಅಯ್ಯರ್ ಕಿವೀಸ್ ದಾಳಿಕಾರರನ್ನು ಸೆದೆ ಬಡಿದರು. ತಮ್ಮ ಆಕರ್ಷಕ ಹೊಡೆತಗಳಿಂದ ನೆರೆದಿದ್ದ ಅಪಾರ ಅಭಿಮಾನಿಗಳನ್ನು ರಂಜಿಸಿದರು. ಕೇವಲ 29 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಐದು ಬೌಂಡರಿ ಸೇರಿ ಅಜೇಯ 58 ರನ್ ಗಳಿಸಿದರು. ಅಯ್ಯರ್ –ಮನೀಷ್ ಪಾಂಡೆ (13 ರನ್) ಜೋಡಿ ಐದನೇ ವಿಕೆಟ್ ಗೆ 62 ರನ್ ಗಳಿಸಿ ಇನ್ನೂ ಒಂದು ಓವರ್ ಬಾಕಿ ಇರುವಂತೆ ಭಾರತವನ್ನು ಗೆಲುವಿನ ದಡ ಸೇರಿಸಿತು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡದ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಮಾರ್ಟಿಕ್ ಗುಪ್ಟಿಲ್ ಹಾಗೂ ಕಾಲಿನ್ ಮನ್ರೊ ಜೋಡಿ ಅಬ್ಬರದ ಪ್ರದರ್ಶನ ತೋರಿತು. ಕೇವಲ 7.5 ಓವರ್ ಗಳಿಗೆ 80 ರನ್ ಗಳನ್ನು ಮೊದಲನೇ ವಿಕೆಟ್ ಚಚ್ಚುವ ಮೂಲಕ ಈ ಜೋಡಿ ತಂಡಕ್ಕೆ ಭರ್ಜರಿ ಆರಂಭ ನೀಡಿತು.

ಮಾರ್ಟಿನ್ ಗುಪ್ಟಿಲ್ 19 ಎಸೆತಗಳಲ್ಲಿ 30 ರನ್ ಗಳಿಸಿ ಶಿವಂ ದುಬೆಗೆ ವಿಕೆಟ್ ನೀಡಿದರು. ಅದ್ಭುತ ಬ್ಯಾಟಿಂಗ್ ಮಾಡಿದ ಕಾಲಿನ್ ಮನ್ರೊ 42 ಎಸೆತಗಳಲ್ಲಿ ಎರಡು ಸಿಕ್ಸರ್ ಆರು ಬೌಂಡರಿಯೊಂದಿಗೆ 59 ರನ್ ಚ್ಚಿ ಔಟ್ ಆದರು.

ನಾಯಕ ಕೇನ್ ವಿಲಿಯಮ್ಸನ್ ಕೂಡ ಸುಮ್ಮನೇ ಇರಲಿಲ್ಲ. ಕ್ರೀಸ್ ಬರುತ್ತಿದ್ದಂತೆ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಕೇವಲ 26 ಎಸೆತಗಳಲ್ಲಿ 51 ರನ್ ಸಿಡಿಸಿ ತಂಡದ ಮೊತ್ತ 150ರ ಗಡಿ ದಾಟಿಸಿದರು. ಮಧ್ಯಮ ಕ್ರಮಾಂಕದಲ್ಲಿ ಭಾರತದ ಬೌಲರ್ ಗಳನ್ನು ನುಚ್ಚು ನೂರು ಮಾಡಿದ ರಾಸ್ ಟೇಲರ್ ಕೇವಲ 27 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು.

ಕಿವೀಸ್ ದಾಂಡಿಗರ ಅಬ್ಬರಕ್ಕೆ ಭಾರತದ ಬೌಲಿಂಗ್ ವಿಭಾಗ ಮಂಕಾಯಿತು. ಶಮಿ ಬಿಟ್ಟು ಇನ್ನುಳಿದವರು ಒಂದೊಂದು ವಿಕೆಟ್ ಪಡೆದರೂ ನ್ಯೂಜಿಲೆಂಡ್ ಎದುರು ದುಬಾರಿಯಾದರು.

ಸಂಕ್ಷಿಪ್ತ ಸ್ಕೋರ್

ನ್ಯೂಜಿಲೆಂಡ್: 20 ಓವರ್ ಗಳಿಗೆ 203/5 (ಕಾಲಿನ್ ಮನ್ರೊ 59, ಕೇನ್ ವಿಲಿಯಮ್ಸನ್ 51, ರಾಸ್ ಟೇಲರ್ ಔಟಾಗದೆ 54; ಶಿವಂ ದುಬೆ 24 ಕ್ಕೆ 2, ಯಜ್ವೇಂದ್ರ ಚಾಹಲ್ 32 ಕ್ಕೆ 1)

ಭಾರತ: 19 ಓವರ್ ಗಳಿಗೆ 204/4 (ಶ್ರೇಯಸ್ ಅಯ್ಯರ್ ಔಟಾಗದೆ 58, ಕೆ.ಎಲ್ ರಾಹುಲ್ 56, ವಿರಾಟ್ ಕೊಹ್ಲಿ 45; ಇಶ್ ಸೋಧಿ 36 ಕ್ಕೆ 2)