ತವರಿಗೆ ಮರಳಿದ ಕಿವೀಸ್ - ಆಸೀಸ್ ಆಟಗಾರರು

ವೆಲ್ಲಿಂಗ್ಟನ್, ಮಾ19,ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದಿಂದ ಮರಳಿರುವ ನ್ಯೂಜಿಲೆಂಡ್ ನ ಪುರುಷರ ಕ್ರಿಕೆಟ್ ತಂಡ ಹಾಗೂ ಸಹಾಯಕ ಸಿಬ್ಬಂದಿಗೆ 14 ದಿನಗಳ ಕಾಲ ಏಕಾಂತವಾಸ ಅನುಭವಿಸುವಂತೆ ಸೂಚಿಸಲಾಗಿದೆ. ಆಸ್ಟ್ರೇಲಿಯಾ ತಂಡಕ್ಕೂ ಇದೇ ಸೂಚನೆ ನೀಡಲಾಗಿದೆ. ಕಳೆದವಾರ ಸಿಡ್ನಿಯಿಂದ ಎಲ್ಲ 15 ಸದಸ್ಯರ ತಂಡ ಹಾಗೂ ಸಹಾಯಕ ಸಿಬ್ಬಂದಿ ತವರಿಗೆ ಮರಳಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್, ಗುರುವಾರ ಖಚಿತಪಡಿಸಿದೆ. ಪ್ರಧಾನಮಂತ್ರಿ ಜಸಿಂದಾ ಆರ್ಡೆರ್ನ್ಸ್ ನಿರ್ದೇಶನದ ಮೇರೆಗೆ ಅವರೆಲ್ಲರಿಗೂ  ಮನೆಯಲ್ಲಿಯೇ ಸ್ವಯಂ ನಿರ್ಬಂಧ ಹೇರಲಾಗಿದೆ.
ಮೂರು ಪಂದ್ಯಗಳ ಚಾಪೆಲ್ - ಹೆಡ್ಲೀ ಸರಣಿ ಅರ್ಧದಲ್ಲೇ ರದ್ದಾದ ಕಾರಣ ಕೇನ್ ವಿಲಿಯಮ್ಸನ್ ಬಳಗ ತವರಿಗೆ ಮರಳಿದೆ. ಸಿಡ್ನಿ ಕ್ರೀಡಾಂಗಣದಲ್ಲಿ  ಪ್ರೇಕ್ಷಕರನ್ನು ಹೊರಗಿಟ್ಟು ನಡೆದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ  71 ರನ್ ಗಳಿಂದ ಸೋಲುಂಡಿತ್ತು. ಕೊರೊನಾ ವೈರಸ್ ನಿಂದಾಗಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್  ನಡುವಿನ ಟಿ20 ಸರಣಿಯು ರದ್ದಾಗಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡ ಮಾರ್ಚ್ 24ರಿಂದ 29ರವರೆಗೆ ಮೂರು ಪಂದ್ಯಗಳನ್ನಾಡಬೇಕಿತ್ತು.ಈ ಮಧ್ಯೆ, ಭಾರತದಿಂದ ತವರಿಗೆ ವಾಪಾಸ್ಸಾಗಿರುವ ದಕ್ಷಿಣ ಆಫ್ರಿಕಾ ಪುರುಷರ ಕ್ರಿಕೆಟ್ ತಂಡಕ್ಕೂ 14 ದಿನಗಳ ಗೃಹ ಬಂಧನಕ್ಕೆ ಸೂಚಿಸಲಾಗಿದೆ.