ನವದೆಹಲಿ, ಅ 24: ರಾಷ್ಟ್ರೀಯ ರಾಜಧಾನಿ ಪ್ರದೇಶವಾಗಿರುವ ದೆಹಲಿಯಲ್ಲಿ ಮುಂಬರುವ ಚುನಾವಣೆಯಲ್ಲಿ ಪಕ್ಷ ಸರ್ಕಾರ ರಚಿಸಲು ಸಾಧ್ಯವಾಗುವಂತೆ ಪ್ರದೇಶ ಕಾಂಗ್ರೆಸ್ ರಾಜ್ಯ ಸಮಿತಿ ಕಠಿಣವಾಗಿ ಶ್ರಮಿಸಲಿದೆ ಎಂದು ನೂತನ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಭಾಷ್ ಚೋಪ್ರಾ ಹಾಗೂ ಪ್ರಚಾರ ಸಮಿತಿ ಮುಖ್ಯಸ್ಥ ಕೀರ್ತಿ ಆಜಾದ್ ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಭರವಸೆ ನೀಡಿದ್ದಾರೆ.
ಆಜಾದ್ ಅವರು, ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರೊಂದಿಗೆ 10ನೇ ಜನಪಥ್ ನಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು.
ಗುರುವಾರ ಬೆಳಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಆರ್ಶಿವಾದ ಪಡೆಯಲು ಅವರನ್ನು ಭೇಟಿ ಮಾಡಿ, ಮುಂಬರಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 70 ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಠಿಣವಾಗಿ ಶ್ರಮಿಸುವ ಭರವಸೆ ನೀಡಿರುವುದಾಗಿ ಭೇಟಿಯ ನಂತರ ಕೀರ್ತಿ ಆಜಾದ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಛೋಪ್ರಾ ಅವರನ್ನು ದೆಹಲಿ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ, ಕೀರ್ತಿ ಆಜಾದ್ ಅವರನ್ನು ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ಬುಧವಾರ ನೇಮಿಸಲಾಗಿತ್ತು. ಛೋಪ್ರಾ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ನೇಮಕವಾಗಿದ್ದು, ಈ ಹಿಂದೆ ಅವರು 1998ರಿಂದ ಜೂನ್ 2003ರವರೆಗೆ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು.
ಹಾಲಿ ಅಧ್ಯಕ್ಷೆ ಶೀಲಾ ದೀಕ್ಷಿತ್ ಅವರ ನಿಧನ ಹೊಂದಿದ ಮೂರು ತಿಂಗಳ ನಂತರ ಈ ನೇಮಕಾತಿ ನಡೆಸಲಾಗಿದೆ.
ಚೋಪ್ರಾ ಅವರು ದೆಹಲಿ ಕಲ್ಕಾಜಿ ವಿಧಾನ ಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು. 1998ರಲ್ಲಿ ಮೊದಲ ಬಾರಿ ಶಾಸಕರಾಗಿ ಚುನಾಯಿತ ರಾಗಿದ್ದರು ನಂತರ 2003 ಹಾಗೂ 2008 ಈ ಕ್ಷೇತ್ರವನ್ನು ಉಳಿಸಿಕೊಂಡಿದ್ದರು.