ಲಕ್ನೋ,ಅ 26: ಹಿಂದು ಸಮಾಜ ಪಾರ್ಟಿಯ ನೂತನ ಅಧ್ಯಕ್ಷೆಯಾಗಿ ಕಮಲೇಶ್ ತಿವಾರಿ ಪತ್ನಿ ಕಿರಣ್ ತಿವಾರಿ ಅವರನ್ನು ಅಯ್ಕೆ ಮಾಡಲಾಗಿದ್ದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಹಿಂದೂ ಸಮಾಜ ಪಾರ್ಟಿಯ ಸಂಸ್ಥಾಪಕ ಹಾಗೂ ಮುಖ್ಯಸ್ಥರಾಗಿದ್ದ ಕಮಲೇಶ್ ತಿವಾರಿಯವರನ್ನು ದುಷ್ಕರ್ಮಿಗಳ ಗುಂಪು ಗುಂಡಿನ ದಾಳಿ ಮಾಡಿ ಹತ್ಯೆ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ತಿವಾರಿಯವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವಿಗೀಡಾಗಿದ್ದರು. ಈ ಘಟನೆಯಿಂದ ಲಖನೌ ಜನ ಬೆಚ್ಚಿಬಿದ್ದಿದ್ದರು. ಸದ್ಯ ಹಿಂದೂ ಸಮಾಜ ಪಾರ್ಟಿಯ ನೂತನ ಅಧ್ಯಕ್ಷೆಯಾಗಿರುವ ಕಿರಣ್ ತಿವಾರಿ ಅವರು ಇಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹೀಗಾಗಿ ಸುದ್ದಿಗೋಷ್ಠಿಯಲ್ಲಿ ಪತಿಯ ಕೊಲೆಯ ಬಗ್ಗೆ ಏನು ಹೇಳಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ. ಅಕ್ಟೋಬರ್ 22ರಂದು ಗುಜರಾತ್-ರಾಜಸ್ಥಾನ ಗಡಿಭಾಗದಲ್ಲಿ ಗುಜರಾತ್ನ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್) ಕಮಲೇಶ್ ತಿವಾರಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿತ್ತು. ಬಂಧಿತರನ್ನು ಅಶ್ಪಾಕ್ ಹುಸೇನ್ ಜಾಕೀರ್ ಹುಸೇನ್ ಶೇಕ್(34) ಮತ್ತು ಮೊಯಿನುದ್ದೀನ್ ಖುರ್ಷಿದ್ ಪಠಾಣ್ (27) ಎಂದು ಗುರುತಿಸಲಾಗಿದ್ದು, ಇವರಿಬ್ಬರನ್ನು 72 ಗಂಟೆಗಳ ವಿಚಾರಣೆಗಾಗಿ ಸ್ಥಳೀಯ ಕೋರ್ಟ್ ಅನುಮತಿ ನೀಡಿದ ಬಳಿಕ ಅಹಮದಬಾದ್ನಿಂದ ಲಖನೌಗೆ ಕರೆತರಲಾಯಿತು. ಈ ಬೆಳವಣಿಯ ನಂತರ ಹಿಂದೂ ಸಮಾಜ ಪಾರ್ಟಿ ನೂತನ ಅಧ್ಯಕ್ಷೆಯನ್ನು ಆಯ್ಕೆ ಮಾಡಲಾಗಿದೆ. ತಿವಾರಿ ಪ್ರಕರಣದಲ್ಲಿ ಇಲ್ಲಿವರೆಗೂ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮೇಲಿನ ಇಬ್ಬರು ಆರೋಪಿಗಳು ಸೇರಿದಂತೆ ಉಳಿದವರನ್ನು ರಶೀದ್ ಪಠಾಣ್, ಫೈಜಾನ್ ಶೇಕ್ ಮತ್ತು ಮೌಲಾನಾ ಮೊಹ್ಶಿನ್ ಶೇಕ್ ಎಂದು ಗುರುತಿಸಲಾಗಿದ್ದು, ಐವರು ಆರೋಪಿಗಳನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.