ನವದೆಹಲಿ, ಜುಲೈ 9: ಭಾರತ ಮತ್ತು ಪಾಕಿಸ್ತಾನ ನಡುವಿನ 1989ರ ಟೆಸ್ಟ್ ಸರಣಿಯ ವೇಳೆ ಸಂಭವಿಸಿದ್ದ ಚೆಂಡು ವಿರೂಪ ಪ್ರಕರಣದ ಘಟನೆಯನ್ನು ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಬಹಿರಂಗಪಡಿಸಿದ್ದಾರೆ. ರಿವರ್ಸ್ ಸ್ವಿಂಗ್ ಮಾಡಲು ಎರಡೂ ತಂಡಗಳ ಆಟಗಾರರು ಚೆಂಡಿನ ಮೇಲೆ ಗೀಚುತ್ತಿದ್ದರು ಎಂದು ಭಾರತ ತಂಡದ ಮಾಜಿ ಆಟಗಾರ ಹಾಗೂ ಆಯ್ಕೆದಾರ ಹೇಳಿದ್ದಾರೆ.
1989ರಲ್ಲಿ ಭಾರತ ತಂಡ ಪಾಕಿಸ್ತಾನಕ್ಕೆ ಟೆಸ್ಟ್ ಸರಣಿ ಆಡಲು ಪ್ರವಾಸ ಮಾಡಿತ್ತು. ಇದೇ ಸರಣಿಯಲ್ಲಿ ಭಾರತ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹಾಗೂ ಪಾಕ್ ದಿಗ್ಗಜ ವಖಾರ್ ಯೂನಿಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
ಆ ವೇಳೆ ತಮಗೆ ಬೇಕಾದ ರೀತಿಯಲ್ಲಿ ಚೆಂಡನ್ನು ಹೇಗೆ ವಿರೂಪಗೊಳಿಸುತ್ತಿದ್ದರು ಎಂಬುದನ್ನು ಕಿರಣ್ ಮೋರೆ ಸ್ಮರಿಸಿಕೊಂಡಿದ್ದಾರೆ. ಅಂದಿನ ದಿನಗಳಲ್ಲಿ ಚೆಂಡು ವಿರೂಪಗೊಳಿಸುತ್ತಿದ್ದ ಪ್ರಕರಣಗಳ ಸಂಬಂಧ ಆಟಗಾರರಿಗೆ ದಂಡ ವಿಧಿಸುವುದರಲ್ಲಿ ತೀರ್ಪುದಾರರು ಕನಿಷ್ಠ ಪಾತ್ರವನ್ನು ಹೊಂದಿದ್ದರು ಎಂಬುದನ್ನೂ ಮಾಜಿ ಆಟಗಾರ ಹೇಳಿದರು.
"ಅಂದಿನ ದಿನಗಳಲ್ಲಿ ಚೆಂಡನ್ನು ಗೀಚಲು ಅವಕಾಶ ನೀಡಲಾಗಿತ್ತು. ಹಾಗಾಗಿ ನಿರ್ಣಾಯಕ ಸನ್ನಿವೇಶಗಳಲ್ಲಿ ಹೆಚ್ಚು ಸ್ವಿಂಗ್ ಪಡೆಯುವ ಸಲುವಾಗಿ ಚೆಂಡನ್ನು ಉಜ್ಜಲಾಗುತ್ತಿತ್ತು. ಈ ಬಗ್ಗೆ ಯಾವುದೇ ತಂಡದ ಆಟಗಾರರು ದೂರ ನೀಡುತ್ತಿರಲಿಲ್ಲ. ಏಕೆಂದರೆ, ಚೆಂಡು ಸ್ವಿಂಗ್ ಮಾಡಲು ಎರಡೂ ತಂಡಗಳ ಆಟಗಾರರು ಚೆಂಡನ್ನು ಉಜ್ಜುತ್ತಿದ್ದರು. ಹೀಗೆ ಮಾಡುವುದರಿಂದ ಬ್ಯಾಟಿಂಗ್ ಮಾಡಲು ತುಂಬಾ ಕಠಿಣವಾಗಿರುತ್ತಿತ್ತು. ಪಾಕಿಸ್ತಾನದ ಚಾಲೆಂಜ್ ಎದುರಿಸಲು ಹೇಗೆ ಚೆಂಡನ್ನು ಉಜ್ಜಬೇಕು ಹಾಗೂ ಸ್ವಿಂಗ್ ಮಾಡಬೇಕು ಎಂಬಂತೆ ಆ ಪ್ರವಾಸದಲ್ಲಿ ಮನೋಜ್ ಪ್ರಬಾಕರ್ ಕಲಿತಿದ್ದರು," ಎಂದು ತಿಳಿಸಿದರು.