ಮೆಲ್ಬೋರ್ನ, ನ14 : ಪಾಕಿಸ್ತಾನ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 14 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಉಸ್ಮಾನ್ ಖವಾಜ ಹಾಗೂ ಹಿರಿಯ ವೇಗಿ ಪೀಟರ್ ಸಿಡ್ಲೆ ಅವರನ್ನು ಕೈ ಬಿಡಲಾಗಿದೆ.
ಉಸ್ಮಾನ್ ಖವಾಜ ಅವರು ಕಳೆದ ಇಂಗ್ಲೆಂಡ್ ವಿರುದ್ಧದ ಆಷಸ್ ಸರಣಿಯಲ್ಲಿ ಇದ್ದರು. ಆದರೆ, ಕಳೆದ ಐದು ಶೆಪೀಲ್ಡ್ ಶೀಲ್ಡ್ ಪಂದ್ಯಗಳಲ್ಲಿ ಖವಾಜ ಕೇವಲ 11.8ರ ಸರಾಸರಿಯಲ್ಲಿ ರನ್ ಗಳಿಸಿದ್ದರು. ಹಾಗಾಗಿ, ಅವರನ್ನು ಕೈಬಿಡಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ವೆಬ್ಸೈಟ್ ವರದಿ ಮಾಡಿದೆ.
ಕ್ಯಾಮರೋನ್ ಬ್ಯಾಂಕ್ರಾಪ್ಟ್ ಅವರು ತಂಡಕ್ಕೆ ಮರಳಿದ್ದು, 14 ಮಂದಿ ಆಟಗಾರರ ತಂಡದಲ್ಲಿ ವಿಶೇಷವಾಗಿ ಮೂವರು ಆರಂಭಿಕರನ್ನು ಪರಿಗಣಿಸಲಾಗಿದೆ. ಡೇವಿಡ್ ವಾರ್ನರ್ ಹಾಗೂ ಜೋ ಬನ್ರ್ಸ ಇತರೆ ಆರಂಭಿಕರಾಗಿದ್ದು, ಮಾರ್ಕಸ್ ಹ್ಯಾರಿಸ್ ಅವರನ್ನು ಕೈ ಬಿಡಲಾಗಿದೆ.
ಇದಕ್ಕೂ ಮುನ್ನ ವಿಲ್ ಪುಕೋವಸ್ಕಿ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ತಂಡದಿಂದ ಹೊರ ನಡೆದಿದ್ದರು. ಆಯ್ಕೆದಾರರು ಪಾಕಿಸ್ತಾನ ವಿರುದ್ಧದ ಸರಣಿಗೆ ಐದು ವೇಗಿಗಳಿಗೆ ಮಣೆ ಹಾಕಿದ್ದಾರೆ. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟ್ಯಾರ್ಕ, ಜೋಶ್ ಹೇಜಲ್ವುಡ್, ಹಾಗೂ ಜೇಮ್ಸ್ ಪ್ಯಾಟಿನ್ಸನ್ ಅವರನ್ನು ಆಷಸ್ ಸರಣಿಯಿಂದ ಹಾಗೇ ಉಳಿಸಿಕೊಂಡಿದ್ದು, ಮಿಚೆಲ್ ನೇಸರ್ಗಿ ರಾಷ್ಟ್ರೀಯ ತಂಡಕ್ಕೆ ಚೊಚ್ಚಲ ಅವಕಾಶ ನೀಡಲಾಗಿದೆ.
ಆಸ್ಟ್ರೇಲಿಯಾ ಟೆಸ್ಟ್ ತಂಡ: ಟಿಮ್ ಪೈನ್ (ನಾಯಕ), ಕ್ಯಾಮರೋನ್ ಬ್ಯಾಂಕ್ರಾಪ್ಟ್, ಜೋ ಬನ್ರ್ಸ್, ಪ್ಯಾಟ್ ಕಮಿನ್ಸ್ (ಉಪ ನಾಯಕ), ಜೋಶ್ ಹೇಜಲ್ವುಡ್, ಟ್ರಾವಿಸ್ ಹೆಡ್(ಉಪ ನಾಯಕ), ಮಾರ್ನಸ್ ಲಬುಸ್ಚಗ್ನೆ, ನಥಾನ್ ಲಿಯಾನ್, ಮಿಚೆಲ್ ನೇಸರ್, ಜೇಮ್ಸ್ ಪ್ಯಾಟಿನ್ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟ್ಯಾರ್ಕ, ಮ್ಯಾಥ್ಯೂ ವೇಡ್ ಹಾಗೂ ಡೇವಿಡ್ ವಾರ್ನರ್.
ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಮೊದಲನೇ ಪಂದ್ಯವನ್ನು ನ. 21 ರಿಂದ 25ರವರೆಗೆ ಅಡಿಲೇಡ್ ನಲ್ಲಿ ಆಡಲಿದೆ. ಎರಡನೇ ಪಂದ್ಯ ಹಗಲು-ರಾತ್ರಿ ಪಂದ್ಯವಾಗಿದೆ.