ತಿರುವನಂತಪುರ,ಮಾ ೩೧, ಒಂದು ಕಡೆ ಕೊರೊನಾ ವೈರಾಣು ದಿನದಿಂದ ದಿನಕ್ಕೆ ದೇಶಾದ್ಯಂತ ಹರಡುತ್ತಿದ್ದರೆ .... ಮತ್ತೊಂದು ಕಡೆ ಮದ್ಯ ವ್ಯಸನಿಗಳು ಮದ್ಯಪಾನಕ್ಕಾಗಿ ಹಾಹಾಕಾರ ಸೃಷ್ಟಿಸುತ್ತಿದ್ದಾರೆ. ಮದ್ಯ ಸಿಗದೆ ಪಾನ ಪ್ರೇಮಿಗಳು ಆತ್ಮಹತ್ಯೆಗೆ ಒಳಗಾಗುತ್ತಿರುವ ಘಟನೆಗಳು ದೇಶಾದ್ಯಂತ ವರದಿಯಾಗಿವೆ. ವಿಶೇಷವಾಗಿ ಕರ್ನಾಟಕ, ತೆಲಂಗಾಣ,ಕೇರಳದಲ್ಲಿ ಆತ್ಮಹತ್ಯೆಗೊಳಗಾಗುತ್ತಿರುವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಮದ್ಯ ವ್ಯಸನಿಗಳ ಆರ್ತನಾದ ಮರುಗಿರುವ ಕೇರಳ ಸರ್ಕಾರ ಅವರಿಗೆ ಶುಭ ಸುದ್ದಿ ಪ್ರಕಟಿಸಿದೆ. ಕೇರಳದಲ್ಲಿ ಮದ್ಯ ಮಾರಾಟಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಸಿರು ನಿಶಾನೆ ತೋರಿಸಿದ್ದಾರೆ. ಆದರೆ, ಮದ್ಯ ಅಗತ್ಯವಿರುವವರು ವೈದ್ಯರ ಬಳಿಯಿಂದ ಔಷಧ ಚೀಟಿ(ಪ್ರಿಸ್ಕ್ರಿಪ್ಷನ್) ತಂದರೆ ಮಾತ್ರ ಮದ್ಯ ಮಾರಾಟ ಮಾಡಲಾಗುವುದು ಎಂಬ ಷರತ್ತು ವಿಧಿಸಿದೆ. ಸಾಧ್ಯವಾದರೆ ಆನ್‌ಲೈನ್‌ನಲ್ಲಿ ಮದ್ಯ ಪೂರೈಸಲು ಕೇರಳ ಅಧಿಕಾರಿಗಳು ಯೋಜಿಸುತ್ತಿದ್ದಾರೆ. ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿರುವ ಕಾರಣ ಮದ್ಯದಂಗಡಿಗಳನ್ನು ಮುಚ್ಚಲಾಗಿದೆ. ಆದರೆ, ಕೇರಳದಲ್ಲಿ ಸೇವಿಸಲು ಮದ್ಯ ದೊರಕದ ಕಾರಣ ಒಂಬತ್ತು ಮಂದಿ ಆಲ್ಕೋಹಾಲ್ ಪ್ರೇಮಿಗಳು ಸಾವನ್ನಪ್ಪಿದ್ದಾರೆ. ಇವರಲ್ಲಿ ಏಳು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು .. ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಅಬಕಾರಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಮುಖ್ಯಮಂತ್ರಿ ವಿಜಯನ್, ವೈದ್ಯರಿಂದ ಔಷಧ ಚೀಟಿ(ಪ್ರಿಸ್ಕ್ರಿಪ್ಷನ್) ತಂದವರಿಗೆ ಮಾತ್ರ ಮದ್ಯ ಮಾರಾಟ ಮಾಡಲು ನಿರ್ಧರಿಸಿದ್ದಾರೆ.ಇನ್ನೂ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ಮದ್ಯ ದೊರಯದೆ ಬೇಸತ್ತ ೬ ಮದ್ಯ ವ್ಯಸನಿಗಳು ಸೋಮವಾರ ಆತ್ಮ ಹತ್ಯೆಮಾಡಿಕೊಂಡಿದ್ದರು. ತೆಲಂಗಾಣದ ರಂಗಾರೆಡ್ಡಿ ಮತ್ತು ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.