ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇರಳ-ಕರ್ನಾಟಕ ಗಡಿ ಬಂದ್ ವಿವಾದ

ಮಂಗಳೂರು, ಎ.3,ಕೇರಳ-ಕರ್ನಾಟಕ ಗಡಿ ಬಂದ್ ವಿಷಯ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನು ತೆರೆಯುವಂತೆ ಕೇರಳ ಹೈಕೋರ್ಟ್ ಎಪ್ರಿಲ್ 1ರಂದು ನೀಡಿರುವ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕೂಡ ಗಡಿ ಬಂದ್ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು.ಮಿಥುನ್ ತಮ್ಮ ವಕೀಲರಾದ ಸಂಜಯ್ ಎಂ ನುಳಿ ಎಂಬವರ ಮೂಲಕ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾ. ಎಲ್.ನಾಗೇಶ್ವರ ರಾವ್ ಹಾಗೂ ಜಸ್ಟಿಸ್ ದೀಪಕ್ ಗುಪ್ತಾ ಅವರ ಪೀಠ ಈ ಪ್ರಕರಣವನ್ನು ಕರ್ನಾಟಕ ಸರಕಾರ ಸಲ್ಲಿಸಿರುವ ಮತ್ತೊಂದು ಅರ್ಜಿಯ ಜತೆಗೆ ವಿಚಾರಣೆ ನಡೆಸಲಿದೆ.
ನೆರೆಯ ಕಾಸರಗೋಡು ಜಿಲ್ಲೆಯಿಂದ ಮಂಗಳೂರಿಗೆ ದೊಡ್ಡ ಸಂಖ್ಯೆಯಲ್ಲಿ ರೋಗಿಗಳು ಆಗಮಿಸುವುದರಿಂದ ಸದ್ಯದ ಕೊರೋನ ವೈರಸ್ ಸೋಂಕು ಸಮಸ್ಯೆಯನ್ನು ನಿಭಾಯಿಸುವ ಸಮಯದಲ್ಲಿ ಇದು ಇಲ್ಲಿನ ಆರೋಗ್ಯ ಸೇವಾ ಸಂಸ್ಥೆಗಳ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿಸುತ್ತದೆ. ಆದ್ದರಿಂದ ಗಡಿ ಬಂದ್ ಮಾಡಿರುವುದು ಸರಿಯಾದ ಕ್ರಮ ಎಂದು ಅವರು ಅರ್ಜಿಯಲ್ಲಿ ವಾಸಿದಿದ್ದಾರೆ. 'ಜಿಲ್ಲೆಯ ಜನರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಹಾಗೂ ಅವರ ಆರೋಗ್ಯವನ್ನು ರಕ್ಷಿಸುವ ಉದ್ದೇಶದಿಂದ ಮಾತ್ರ ಕೇರಳದಿಂದ ದಕ್ಷಿಣ ಕನ್ನಡಕ್ಕೆ ಜನರು ಆಗಮಿಸುವುದರ ಮೇಲೆ ನಿರ್ಬಂಧ ಹೇರಲಾಗಿದೆ, ಕರ್ನಾಟಕ ಸರಕಾರ ಇಲ್ಲಿನ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗದಂತೆ ಮಾಡುವ ಉದ್ದೇಶದಿಂದ ಸಾಂಕ್ರಾಮಿಕ ರೋಗಗಳ ಕಾಯಿದೆ 1897 ಇದರನ್ವಯ ಈ ನಿರ್ಬಂಧ ಹೇರಿದೆ' ಎಂದು ಮಿಥುನ್ ರೈ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ