ಕೊಚ್ಚಿ, ನ 11 : ಕೇರಳದಲ್ಲಿರುವ ಭಾರತದ ಮೊಟ್ಟ ಮೊದಲ ಮಸೀದಿ ಹಾಗೂ ಉಪಖಂಡದ ಪುರಾತನ ಮಸೀದಿಯಾದ ಚೇರಮನ್ ಜುಮಾ ಮಸೀದಿಯ ನವೀಕರಣಕ್ಕೆ ಅಲ್ಲಿನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇಲ್ಲಿನ ಕೋಡುಂಗಲ್ಲೂರು ಪ್ರದೇಶದಲ್ಲಿರುವ ಕ್ರಿ.ಶ. 629 ರಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿ ಪುರಾತನ ಮಸೀದಿಯನ್ನು 1.13 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ಕೇರಳವ ಪ್ರವಾಸೋದ್ಯಮ ಇಲಾಖೆ ಮುಜಿರಿಸ್ ಪಾರಂಪರಿಕ ಯೋಜನೆಯಾಗಿ ಈ ಪಾರಂಪರಿಕ ತಾಣವನ್ನು ಸಂರಕ್ಷಿಸುತ್ತಿದೆ ಎಂದು ರಾಜ್ಯಪಾಲರು ಮಾಹಿತಿ ನೀಡಿದರು. ನಂತರ ಟ್ವೀಟ್ ಮಾಡಿದ ಅವರು 'ಶತಮಾನದ ಸಂಸ್ಕೃತಿಯನ್ನು ಸಂರಕ್ಷಿಸಿ ಬಿಂಬಿಸುವುದರಿಂದ ನಮಗೆ 'ನೀವು ಹಿಂದೆ ನೋಡಿದಷ್ಟೂ ಮುಂದೆ ನೋಡಲು ಸಾಧ್ಯವಾಗುತ್ತದೆ' ಎಂಬ ಸಂದೇಶ ನೀಡುತ್ತದೆ' ಎಂದಿದ್ದಾರೆ. ಈ ಮಸೀದಿಯಲ್ಲಿ ಇಂದಿಗೂ ಶತಮಾನದ ಹಿಂದಿನ ಕೆರೆ ಮತ್ತು ದೀಪಗಳನ್ನು ಸಂರಕ್ಷಿಸಲಾಗಿದ್ದು, ಈ ದಿನಗಳು ಪ್ರತಿನಿತ್ಯ ಎಲ್ಲಾ ಧರ್ಮದ ಯಾತ್ರಿಕರು ಮತ್ತು ಪ್ರವಾಸಿಗರು ತರುವ ಎಣ್ಣೆಯಿಂದ ಸಾವಿರಾರು ವರ್ಷಗಳಿಂದ ಉರಿಯುತ್ತಿದೆ ಎನ್ನಲಾಗಿದೆ.