ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿ ಭೇಟಿಅವ್ಯವಸ್ಥೆ ಕಂಡು ಕೆಂಡಾಮಂಡಲ: ಮುಖ್ಯ ವೈದ್ಯಾಧಿಕಾರಿ ತರಾಟೆಗೆ
ರಾಯಬಾಗ 15: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲಾಗಿ ಮುಖ್ಯ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಪರೀಶೀಲಿಸಿದ ಅವರು, ಬಾನಂತಿಯರ ಕೋಣೆಯಲ್ಲಿ ಸರಿಯಾದ ನಳದ ವ್ಯವಸ್ಥೆ ಮತ್ತು ಕಿಟಕಿಗಳಲ್ಲಿ ಧೂಳನ್ನು ಕಂಡು ಬೇಸರ ವ್ಯಕ್ತಪಡಿಸಿದ ಅವರು, ಬಾನಂತಿ ಮತ್ತು ಹಸುಗೂಸು ಇರುವ ಕೋಣೆ ಸ್ವಚ್ಛವಾಗಿಡಲು ಏನೂ ತೊಂದರೆ ಎಂದು ಪ್ರಶ್ನಿಸಿದರು. ಆಸ್ಪತ್ರೆ ಮೇಲ್ಛಾವಣಿಯಲ್ಲಿ ಇರುವ ನೀರಿನ ಟ್ಯಾಂಕ್‌ಗಳ ಮೇಲೆ ಮುಚ್ಚಳ ಇರದೇ ಇರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಾವು ಬರುವ ವಿಚಾರ ತಿಳಿದು, ಈಗಷ್ಟೇ ನೆಲಹಾಸು ಸ್ವಚ್ಛಗೊಳಿಸಿ, ಸೂಚನಾ ಫಲಕ ಅಳವಡಿಸಿದ್ದಾರೆ, ಇಲ್ಲಿ ಸರಿಯಾಗಿ ಓಷಧ ಇರೋದಿಲ್ಲ, ಹೊರಗಡೆ ತೆಗೆದುಕೊಳ್ಳರಿ ಎಂದು ಚೀಟಿ ಬರೆದು ಕೊಡುತ್ತಾರೆ, ಗರ್ಭಿಣಿಯರಿಗೆ ಡೇಲಿವರಿಗಾಗಿ ಬೆಳಗಾವಿ ಮತ್ತು ಚಿಕ್ಕೋಡಿಗೆ ಕಳುಹಿಸುತ್ತಾರೆ, ಜನರೇಟರ್ ಇದ್ದರೂ ಕೂಡ ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇರೋದಿಲ್ಲ, ಇಲ್ಲಿನ ನರ್ಸ್ ಗಳು ರೋಗಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಡಿ ದರ್ಜೆ ಗುತ್ತಿಗೆದಾರ ನೌಕರರು ತಮಗೆ ಕೇವಲ ತಿಂಗಳಿಗೆ 6 ಸಾವಿರ ವೇತನ ನೀಡುತ್ತಾರೆ ಎಂಬ ವಿಷಯ ತಿಳಿದ ಕೂಡಲೇ ಅಲ್ಲಿಯೇ ಇದ್ದ ತಾಲೂಕಾ ಆರೋಗ್ಯಾಧಿಕಾರಿ ಈ ಬಗ್ಗೆ ಕೇಳಿದಾಗ, ಅವರು 18-19 ಸಾವಿರ ವೇತನ ಇರುವುದಾಗಿ ಹೇಳಿದ ಕೂಡಲೆ, ಜಿಲ್ಲಾ ಆರೋಗ್ಯಾಧಿಕಾರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ನಾಗಲಕ್ಷ್ಮಿ ಅವರು, ಡಿ.ಎಚ್.ಒ ಅವರು ಕೂಡ ತಪ್ಪು ಮಾಹಿತಿ ನೀಡಿದ್ದಕ್ಕೆ ಕೆಂಡಾಮಂಡಲಗೊಂಡು, ನೀವು ಎಲ್ಲರೂ ಏಜೆನ್ಸಿ ಅವರೊಂದಿಗೆ ಕೂಡಿ ಕೊಂಡು, ಸುಮಾರು 15-16 ವರ್ಷ ಕೇವಲ 6 ಸಾವಿರ ವೇತನ ಪಡೆದುಕೊಂಡು ಕೆಲಸ ಮಾಡುತ್ತಿರುವ ಡಿ ದರ್ಜೆ ನೌಕರರಿಗೆ ಅನ್ಯಾಯ ಮಾಡ್ತಾ ಇದ್ದೀರಿ, ಅವರಿಗೆ ಇಲ್ಲಿ ವರೆಗೆ ದೊರಕಬೇಕಿರುವ ಎಲ್ಲ ವೇತನ ಭರಿಸಿ ಕೊಡಬೇಕೆಂದು ತಾಕೀತು ಮಾಡಿದ ಅವರು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಒಳ ರೋಗಿಗಳಿಂದ ಆಸ್ಪತ್ರೆಯಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಬಡ ಜನರು ಬರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ರೋಗಿಗಳಿಗೆ ಒಳ್ಳೆಯ ಚಿಕಿತ್ಸೆಯನ್ನು ನೀಡಬೇಕೆಂದು ವೈದ್ಯರಿಗೆ ಮತ್ತು ನರ್ಸ್ ಗಳಿಗೆ ಸೂಚಿಸಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಮ್.ಪಾಟೀಲ, ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಚ್.ರಂಗಣ್ಣವರ, ಆಯ್ಯುಷ ವೈದ್ಯಾಧಿಕಾರಿ ಡಾ.ಆರತಿ ಚಿನಕೊಟಿ, ವೈದ್ಯರಾದ ಡಾ.ಸದಾಶಿವ ಖನದಾಳೆ, ಡಾ.ಸಿದ್ದಾರ್ಥ ಮಗದುಮ್ಮ, ಡಾ. ಡಾ. ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್.ಪಾಟೀಲ, ನಂದಕುಮಾರ ಪಾಟೀಲ, ಶ್ರೀಶೈಲ ಶಿರೂರ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.