ನವದೆಹಲಿ, ಫೆ .12: ಆಮ್ ಆದ್ಮಿ ಪಕ್ಷದ (ಎಪಿಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಬರುವ ಭಾನುವಾರದಂದು (ಫೆ 16) ಇಲ್ಲಿನ ರಾಮ್ ಲೀಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸತತ ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಭರ್ಜರಿ ಜಯ ದಾಖಲಿಸಿದ್ದು, ಒಟ್ಟು 70 ಸ್ಥಾನಗಳ ಪೈಕಿ 62 ಸ್ಥಾನಗಳನ್ನು ಗೆದ್ದಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇವಲ ಎಂಟು ಸ್ಥಾನಗಳನ್ನು ಗೆದ್ದಿದ್ದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಸತತ ಎರಡನೇ ಬಾರಿಗೆ ಶೂನ್ಯ ಸಂಪಾದನೆ ಮಾಡಿದೆ.
2015ರ ಚುನಾವಣೆಯಲ್ಲಿ ಎಎಪಿ 67, ಬಿಜೆಪಿ 3 ಸ್ಥಾನಗಳನ್ನು ಗೆದ್ದಿದ್ದವು. ಈ ಚುನಾವಣೆಯಲ್ಲಿ ಬಿಜೆಪಿಗೆ ಶೇಕಡವಾರು ಮತ ಪ್ರಮಾಣದಲ್ಲಿ(ಶೇ 3ರಷ್ಟು) ಹೆಚ್ಚಾಗಿ, ಹಿಂದಿನ ಚುನಾವಣೆಗಿಂತ ಐದು ಸ್ಥಾನ ಹೆಚ್ಚು ಗಳಿಸಿದೆ.
ಆದರೆ, ಕಾಂಗ್ರೆಸ್ ನ ಸ್ಥಿತಿ ಶೋಚನೀಯವಾಗಿದ್ದು, 2015ರಲ್ಲಿ ಶೇ 9.7ರಷ್ಟಿದ್ದ ಶೇಕಡವಾರು ಮತ ಪ್ರಮಾಣ, ಈ ಚುನಾವಣೆಯಲ್ಲಿ ಶೇ 4.29ಕ್ಕೆ ಇಳಿದಿದೆ.