ಮಗಳನ್ನು ರಾಜಕೀಯದಿಂದ ದೂರವಿಡಿ; ಬಿಬಿಸಿಐ ಅಧ್ಯಕ್ಷ ಗಂಗೂಲಿ ಮನವಿ

ನವದೆಹಲಿ, ಡಿ 19ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಇನ್ ಸ್ಟಾಗ್ರಾಮ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ಟ್ರೋಲ್ ಗೆ ಒಳಗಾಗಿರುವ ಮಗಳನ್ನು ಸಮರ್ಥಿಸಿಕೊಂಡಿರುವ ಭಾರತದ ಮಾಜಿ ಕ್ರಿಕೆಟಿಗ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ತಮ್ಮ ಮಗಳನ್ನು ರಾಜಕೀಯದಿಂದ ದೂರವಿಡಿ ಎಂದು ಮನವಿ ಮಾಡಿದ್ದಾರೆ.   ಈ ಕುರಿತು ಟ್ವೀಟ್ ಮಾಡಿರುವ ಅವರು “ದಯವಿಟ್ಟು ಸನಾಳನ್ನು ಈ ವಿಷಯಗಳಿಂದ ದೂರವಿರಿ. ಆ ಪೋಸ್ಟ್ ನಿಜವಲ್ಲ..ರಾಜಕೀಯದ ಕುರಿತು ಏನನ್ನಾದರೂ ಅರಿಯಲು ಆಕೆಯಿನ್ನೂ ತುಂಬಾ ಸಣ್ಣವಳು” ಎಂದಿದ್ದಾರೆ.   ಸನಾ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕುಷವಂತ್ ಸಿಂಗ್ ಅವರ 2003ರಲ್ಲಿ ಪ್ರಕಟಿತ ‘ ದಿ ಎಂಡ್ ಆಫ್ ಇಂಡಿಯಾ’ ಪುಸ್ತಕದ ಕೆಲ ಸಾಲುಗಳನ್ನು ಹಂಚಿಕೊಂಡಿದ್ದರು ಎಂದು ಸುದ್ದಿಯಾಗಿತ್ತು.   ಆ ಸಾಲುಗಳು ‘ಪ್ರತಿ ಫ್ಯಾಸಿಸ್ಟ್ ಆಡಳಿತವು ಅಭಿವೃದ್ಧಿ ಹೊಂದಲು ಸಮುದಾಯಗಳು ಮತ್ತು ಗುಂಪುಗಳ ಅಗತ್ಯವಿದೆ. ಇದು ಒಂದು ಅಥವಾ ಎರಡು ಗುಂಪುಗಳಿಂದ ಆರಂಭವಾಗುತ್ತದೆ. ಆದರೆ ಅದು ಅಲ್ಲಿಗೆ ನಿಲ್ಲುವುದಿಲ್ಲ.  ದ್ವೇಷದ ಆಧಾರದ ಮೇಲೆ ಆರಂಭಗೊಂಡಿರುವ ಆ ಚಳವಳಿ ನಿರಂತರವಾಗಿ ಭಯ ಹಾಗೂ ಹೋರಾಟವನ್ನು ಸೃಷ್ಟಿಸುವ ಮೂಲಕ ಮಾತ್ರ ಬದುಕುಳಿಯಲು ಸಾಧ್ಯ’ ಎಂಬುದಾಗಿತ್ತು.