ನವದೆಹಲಿ, ಅ 9: ಭಾರತ - ಚೀನಾ ನಡುವೆ ಎರಡನೇ ಶೃಂಗಸಭೆ ನಡೆಯಲು ಕೆಲವೇ ಕೆಲವು ಗಂಟೆಗಳು ಬಾಕಿ ಇರುವಾಗಲೇ ಕಾಶ್ಮೀರ ವಿಚಾರ ಕುರಿತು ಚೀನಾ ತನ್ನ ರಾಗ ಬದಲಿಸಿದೆ. ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿನ್ ಹಾಗೂ ಪ್ರಧಾನಿ ಮೋದಿ ನಡುವೆ ಎರಡನೇ ಭಾರತ - ಚೀನಾ ಶೃಂಗಸಭೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಶೃಂಗಸಭೆಗೂ ಮುನ್ನವೇ ಕಾಶ್ಮೀರ ವಿವಾದ ಕುರಿತಂತೆ ಭಾರತ ಮತ್ತು ಪಾಕಿಸ್ತಾನ ನೇರವಾಗಿ ಮಾತುಕತೆ ನಡೆಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಮತ್ತು ಜನರ ನಡುವಿನ ಅಪನಂಬಿಕೆಯನ್ನು ದೂರ ಮಾಡಲು ಎರಡೂ ರಾಷ್ಟ್ರಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಚೀನಾ ಒತ್ತಾಯ ಮಾಡಿದೆ. ಜಮ್ಮು - ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ವಾಪಸ್ ಪಡೆದುಕೊಂಡ ನಂತರ ಚೀನಾ, ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಪರವಾಗಿಯೇ ತನ್ನ ನಿಲುವು ವ್ಯಕ್ತಪಡಿಸಿತ್ತು. ಆದರೀಗ ಚೀನಾ ಅಧ್ಯಕ್ಷರೇ ಭಾರತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಚೀನಾ ತನ್ನ ವರಸೆ ಬದಲಿಸಿದೆ. ಈ ನಡುವೆ ಶೃಂಗಸಭೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಮಾಮಲ್ಲಾಪುರಂನಲ್ಲಿ ಹಿಂದೆಂದೂ ಕಾಣದಷ್ಟು ಬಿಗಿಭದ್ರತೆ ಏರ್ಪಡಿಸಲಾಗಿದೆ. ಮೂರು ದಿನಗಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸಿದ್ದರು.