ಧಾರವಾಡ 24: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮದಲ್ಲಿ ಸುಮಾರು 26 ಅಮಾಯಕ ಭಾರತೀಯರ ಮೇಲೆ ಭಯೋತ್ಪಾದನಾ ಗುಂಡಿನ ದಾಳಿ ನಡೆಸಿರುವ ಉಗ್ರರ ದುಷ್ಕೃತ್ಯವನ್ನು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತೀವ್ರವಾಗಿ ಖಂಡಿಸಿದ್ದಾರೆ.
ಪ್ರವಾಸಕ್ಕೆಂದು ತೆರಳಿರುವ ಮುಗ್ಧ ಜನರ ಜಾತಿ-ಧರ್ಮಗಳನ್ನು ಕೇಳಿ ಕೇಳಿ ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವುದು ಅತ್ಯಂತ ಹೀನ ಪೈಶಾಚಿಕ ಕೃತ್ಯವಾಗಿದ್ದು, ಇದೊಂದು ಬಹುದೊಡ್ಡ ಅಕ್ಷಮ್ಯ ಅಪರಾಧವಾಗಿದೆ. ಈ ದಾಳಿಯು ಎಷ್ಟೋ ಜನರ ಬದುಕನ್ನೇ ಕಸಿದುಕೊಂಡಿದೆ. ನಮ್ಮ ವಿವಾಹಿತ ಸಹೋದರಿಯರು ತಮ್ಮ ಪತಿಯನ್ನು ಕಳೆದುಕೊಂಡು ದಿಕ್ಕು ತೋಚದೇ ಕತ್ತಲೆಯಿಂದ ಸುತ್ತುವರೆದಿದ್ದಾರೆ ಎಂದಿದ್ದಾರೆ.
ವಿಶ್ವದೆಲ್ಲೆಡೆ ಚಿಂತನೆ ಅಗತ್ಯ : ಮನುಕುಲದ ಬದುಕನ್ನು ಹೊಸಕಿ ಹಾಕುವ ಹೇಯ ಕೃತ್ಯವಾದ ಭಯೋತ್ಪಾದನೆಯನ್ನು ಮತ್ತು ಉಗ್ರವಾದಿಗಳ ಕುಕೃತ್ಯಗಳನ್ನು ಮಟ್ಟಹಾಕುವಲ್ಲಿ ವಿಶ್ವದೆಲ್ಲೆಡೆ ವ್ಯಾಪಕ ಚಿಂತನೆ ನಡೆಯುವ ಅಗತ್ಯವಿದೆ. ಭಯೋತ್ಪಾದನೆಯನ್ನು ಸಂಪೂರ್ಣ ಮುಕ್ತಗೊಳಿಸುವಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಕೈಜೋಡಿಸಬೇಕು. ಉಗ್ರರ ನಿರ್ಮೂಲನೆಗೆ ಭಾರತ ಸರಕಾರ ಕೈಕೊಳ್ಳುವ ಎಲ್ಲಾ ಬಿಗಿಕ್ರಮಗಳಿಗೆ ದೇಶದ ಎಲ್ಲ ರಾಜ್ಯ ಸರಕಾರಗಳು ಪಕ್ಷಭೇದ ಮರೆತು ಒಂದಾಗಿ ಸಹಕಾರ ನೀಡಬೇಕೆಂದು ಹೇಳಿದ್ದಾರೆ
ಶಾಂತಿ-ಸಹಬಾಳ್ವೆಗೆ ಹೆಸರಾಗಿದ್ದ ದೇವಭೂಮಿ ಭಾರತದ ನೆಲದಲ್ಲಿ ನಡೆದಿರುವ ಉಗ್ರರ ಭಯೋತ್ಪಾದಕ ದಾಳಿಯಿಂದ ವಿಶ್ವದ ವಿದ್ಯಮಾನಗಳಲ್ಲಿ ದೇಶದ ಏಕತೆ ಮತ್ತು ಸಮಗ್ರತೆಯ ವಿಷಯ ಚರ್ಚೆಯ ವಸ್ತುವಾಗಿದೆ. ಈ ಹೃದಯ ವಿದ್ರಾವಕ ಘಟನೆಯಿಂದ ಭಾರತದ ಮೇರು ಆಧ್ಯಾತ್ಮಿಕ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಕಾಶಿ ಜಗದ್ಗುರುಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಸಾಂತ್ವನ ಸಂದೇಶ: ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮಂಜುನಾಥರಾವ್, ಬೆಂಗಳೂರಿನ ಮದುಸೂದನ್ ರಾವ್ ಮತ್ತು ಹಾವೇರಿಯ ಭರತ್ ಭೂಷಣ ಸೇರಿದಂತೆ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾದ ವಿವಿಧ ರಾಜ್ಯಗಳ 26 ಜನರ ಕುಂಟುಂಬಗಳ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ಪ್ರಾಪ್ತಿಯಾಗಲಿ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸಾಂತ್ವನ-ಸಮಾಧಾನದ ಸಂದೇಶ ಅನುಗ್ರಹಿಸಿದ್ದಾರೆ.