ಆದಾಯ ಪ್ರವಾಸೋದ್ಯಮ ಇಲಾಖೆಗೆ : ಸದಸ್ಯರಿಂದ ತೀವ್ರ ಆಕ್ಷೇಪ
ಕಾರವಾರ 15: ನಗರದ ರವೀಂದ್ರನಾಥ ಟ್ಯಾಗೋರ ಕಡಲ ತೀರಕ್ಕೆ ಸಂಬಂಧಿಸಿದ ಆದಾಯ ಪ್ರವಾಸೋದ್ಯಮ ಇಲಾಖೆಗೆ ಹೋಗುತ್ತಿರುವಾಗ ಟ್ಯಾಗೋರ್ ಕಡಲ ತೀರಕ್ಕೆ ನಗರಸಭೆಯಿಂದ ಏಕೆ ಅನುದಾನ ವ್ಯಯಿಸಬೇಕೆಂಬ ಆಕ್ಷೇಪ ನಗರಸಭೆಯ ಬಹುತೇಕ ಸದಸ್ಯರಿಂದ ವ್ಯಕ್ತವಾಯಿತು.
ನಗರಸಭೆ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ಪಕ್ಷದ ಸದಸ್ಯ ಸಂದೀಪ ತಳೇಕರ್ ಅವರು, ಕಡಲ ತೀರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಲು ನಗರಸಭೆಯಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಹಲವಾರು ವರ್ಷದಿಂದ ನಗರಸಭೆಯ ಅನುದಾನ ಬಳಕೆ ಮಾಡುವುದು ಬೇಡವೆಂದು ಸಭೆಯಲ್ಲಿ ಹೇಳುತ್ತಲೇ ಬರಲಾಗಿದೆ. ಆದರೂ ಸದಸ್ಯರ ಮಾತಿಗೆ ಬೆಲೆಯಿಲ್ಲದಾಗಿದೆ. ಆದಾಯ ಸಿಎಂಸಿಗೆ ಬರುವವರೆಗೂ ಬೀಚ್ ಅಭಿವೃದ್ಧಿ ಮಾಡಲು ಆಕ್ಷೇಪವಿದೆ ಎಂದರು.ಪೌರಾಯುಕ್ತ ಜಗದೀಶ ಮಾತನಾಡಿ, ಇದು ಮೊದಲು ವೆಚ್ಚ ಮಾಡಿದ ಹಣವಾಗಿದೆ. ಜಿಲ್ಲಾಧಿಕಾರಿ ನಗರಸಭೆಯ ಆಡಳಿತಾಧಿಕಾರಿಯಿದ್ದಾಗ ಅವರ ಆದೇಶದಂತೆ ಅನುದಾನ ಬಳಕೆಯಾಗಿತ್ತು ಎಂದರು.ಸದಸ್ಯ ಪಿ.ಗುನಗ ಮಾತನಾಡಿ, ವಾರ್ಡ್ನಲ್ಲಿ ಯಾವ ಅಭಿವೃದ್ಧಿಯೂ ಆಗುತ್ತಿಲ್ಲ. ಕಡಲ ತೀರಕ್ಕೆ ಅನುದಾನ ಬಳಕೆ ಮಾಡಲಾಗುತ್ತಿದೆ. ಸಭೆ ಮಾಡುವುದು ಹೋಗುವುದು ಆಗಿದೆ. ತೀರದಲ್ಲಿ ಉತ್ಸವಗಳನ್ನು ಮಾಡುತ್ತಾರೆ. ಅದರಿಂದ ಜಿಲ್ಲಾಡಳಿತ ಶುಲ್ಕ ಪಡೆಯುತ್ತಿದೆ. ನಗರಸಭೆಗೆ ಆದಾಯವೇ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಬೀದೀದೀಪದ ಉರಿಯದ ಬಗ್ಗೆ ಪ್ರೇಮಾನಂದ ಕೇಳಿದಾಗ, ಕಾರವಾರ ಮುಖ್ಯರಸ್ತೆಯಲ್ಲಿ ಸೋಲಾರ್ ಲೈಟ್ ಇತ್ತು. ಅದರ ಬದಲಾವಣೆ ಮಾಡಲಾಗುತ್ತಿದೆ ಎಂದು ಅಧ್ಯಕ್ಷ ರವಿರಾಜ ತಿಳಿಸಿದರು. ಮೀನುಮಾರುಟಕ್ಟೆಯಲ್ಲಿ ಇರುವ ಕೋಲ್ಡ್ ಸ್ಟೋರೆಜ್ ವಿಷಯ ಚರ್ಚೆಗೆ ಬಂತು. ಬೀದಿ ಬದಿ ವ್ಯಾಪಾರಿಗಳ ಖಾಯಂ ಅಂಗಡಿ ಹಾಕಿರುವುದು ಒಳಗೊಂಡು ವಿವಿಧ ವಿಷಯಗಳು ಚರ್ಚೆಗೆ ಗ್ರಾಸವಾಯಿತು..ನಗರಸಭೆ ವ್ಯಾಪ್ತಿಯಲ್ಲಿ ಹೊಸ ಗೂಡಂಗಡಿಗಳನ್ನು ಇಡುತ್ತಿರುವ ಬಗ್ಗೆ ಚರ್ಚೆಗೆ ಬಂದಾಗ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಈ ಬಗ್ಗೆ ಸಾಕಷ್ಟು ಚರ್ಚೆಯಾಗಿ ನಗರದಲ್ಲಿ ಕೇವಲ ತಳ್ಳುಗಾಡಿಗಳನ್ನು ಮಾತ್ರ ಇಡಬೇಕು. ವ್ಯಾಪಾರದ ನಂತರ ರಾತ್ರಿ ವೇಳೆ ತಳ್ಳು ಗಾಡಿಯನ್ನು ಕೊಂಡೊಯ್ಯುವಂತೆ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.ಸದಸ್ಯ ಪ್ರೇಮಾನಂದ ಮಾತನಾಡಿ, ಯುಜಿಡಿ ಒಳಚರಂಡಿ ನೀರು ಹೊರಗೆ ಬರುತ್ತಿದೆ. ಇದರಿಂದ ಸುತ್ತಮುತ್ತಲಿನ ವಾತಾವರಣ ಗಬ್ಬುನಾರುತ್ತಿದೆ. ರಾಮಕೃಷ್ಣ ಆಶ್ರಮ ಎದುರು ಪ್ರತಿನಿತ್ಯ ಚರಂಡಿಯ ನೀರು ಉಕ್ಕಿಹರಿಯುತ್ತದೆ. ಆಶ್ರಮಕ್ಕೆ ಶುಚಿಯಾಗಿ ಹೋಗುವವರು ಆ ಹೊಲಸು ನೀರನ್ನು ಮೆಟ್ಟಿಕೊಂಡು ಹೋಗುವಂತಾಗಿದೆ. ವಾರ್ಡ ಸದಸ್ಯರ ಮಾನ ಹರಾಜಾಗುತ್ತಿದೆ ಎಂದು ಕಿಡಿಕಾರಿದರು. ಅಧ್ಯಕ್ಷರವಿರಾಜ ಯುಜಿಡಿ ಚೆಂಬರ ಸಮಸ್ಯೆಯಿಂದ ಹೀಗಾಗುತ್ತಿದೆ ಎಂದರು. ಪೌರಾಯುಕ್ತ ಜಗದೀಶ, ಎರಡೂ ಡೊಡ್ಡ ಚೆಂಬರ ಕಟ್ಟುವುದು ಹಾಗೂ ಕುಸಿದಿರುವ ಚೇಂಬರ ದುರಸ್ತಿ ಮಾಡಿ ನೀರು ಹೊರಬರದಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಸಾಮಾನ್ಯ ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಪ್ರೀತಿ ಜೋಶಿ, ಸ್ಥಾಯಿ ಸಮಿತಿ ಚೇರಮನ್ ಮಾಲಾ ಹುಲಸ್ವಾರ, ಸದಸ್ಯ ಮಕ್ಬೂಲ್ ಶೇಖ್, ಗಣಪತಿ ನಾಯ್ಕ, ಸಂಧ್ಯಾ ಬಾಡಕರ, ರಾಜೇಶ್ ಮಾಜಾಳಿಕರ್ ಸೇರಿದಂತೆ ಸದಸ್ಯರು ,ಅಧಿಕಾರಿಗಳು ಉಪಸ್ಥಿತರಿದ್ದರು.