ಮೈಸೂರು, ಡಿ 25 ನಾಯಕ ಕರುಣ್ ನಾಯರ್ (81 ರನ್) ಅವರ ಅರ್ಧಶತಕದ ಹೊರತಾಗಿಯೂ ಕನ್ವರ್ ಅಭಿನಯ್ ಸಿಂಗ್ (37ಕ್ಕೆ5) ಅವರ ಮಾರಕ ದಾಳಿಗೆ ನಲುಗಿದ ಕರ್ನಾಟಕ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಮೂರನೇ ಸುತ್ತಿನ ಪಂದ್ಯದಲ್ಲಿ ಹಿಮಾಚಲ ಪ್ರದೇಶ ವಿರುದ್ಧ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ಇಲ್ಲಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಕರ್ನಾಟಕ ತಂಡ 67.2 ಓವರ್ ಗಳಿಗೆ 166 ರನ್ ಗಳಿಗೆ ಆಲೌಟ್ ಆಯಿತು. ನಂತರ, ಪ್ರಥಮ ಇನಿಂಗ್ಸ್ ಆರಂಭಿಸಿದ ಹಿಮಾಚಲ ಪ್ರದೇಶ 17 ಓವರ್ ಗಳಿಗೆ 3 ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿದ್ದು, 137 ರನ್ ಹಿನ್ನಡೆಯಲ್ಲಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ್ಕೆ ಕನ್ವರ್ ಅಭಿನಯ್ ಸಿಂಗ್ ಆರಂಭಿಕ ಆಘಾತ ನೀಡಿದರು. ತಂಡದ ಮೊತ್ತ 10 ಇರುವಾಗಲೇ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿದರು. ಆರಂಭಿಕರಾಗಿ ಕಣಕ್ಕೆ ಇಳಿದ ಮಯಾಂಕ್ ಅಗರ್ವಾಲ್ ಹಾಗೂ ಡಿ.ನಿಶ್ಚಲ್ ಜೋಡಿ ಖಾತೆ ತೆರೆಯದೆ ಬೇರ್ಪಟ್ಟಿತು. ರಾಷ್ಟ್ರೀಯ ತಂಡದಿಂದ ತವರು ತಂಡದ ಸೇವೆ ಆಗಮಿಸಿದ ಮಯಾಂಕ್, ಆಡಿದ ಮೊದಲನೇ ಎಸೆತದಲ್ಲಿ ಕನ್ವರ್ ಅಭಿನಯ್ ಸಿಂಗ್ ಗೆ ವಿಕೆಟ್ ಒಪ್ಪಿಸಿದರು. ಇವರ ಹಿಂದೆಯೇ ದೇವದತ್ತ ಪಡಿಕ್ಕಲ್ ಅವರನ್ನು ಇದೇ ಬೌಲರ್ ಪೆವಿಲಿಯನ್ ಗೆ ಅಟ್ಟಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ರವಿಕುಮಾರ್ ಸಮರ್ಥ್ ಅವರು ಕೇವಲ 4 ರನ್ ಗಳಿಸಿ ಕೆ. ಅಭಿನಯ್ ಗೆ ವಿಕೆಟ್ ಒಪ್ಪಿಸಿದರು. ಕೆಲಕಾಲ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಡಿ.ನಿಶ್ಚಲ್ 16 ರನ್ ಗಳಿಸಿ ಭರವಸೆ ಮೂಡಿಸಿದ್ದರು. ಆದರೆ, ಅವರನ್ನು ರಿಷಿ ಧವನ್ ಔಟ್ ಮಾಡಿದರು. ಮಧ್ಯಮ ಕ್ರಮಾಂಕದಲ್ಲಿ ಉಪ ನಾಯಕ ಶ್ರೇಯಸ್ ಗೋಪಾಲ್ 52 ಎಸೆತಗಳಲ್ಲಿ 27 ರನ್ ಗಳಿಸಿ ದೊಡ್ಡ ಇನಿಂಗ್ಸ್ ಕಟ್ಟುವ ನಿರೀಕ್ಷೆ ಮೂಡಿಸಿದ್ದರು. ಆದರೆ, ಅವರನ್ನು ವೈಭವ್ ಅರೋರ ಪೆವಿಲಿಯನ್ ಸೇರಿಸಿದರು. ಬಿ.ಆರ್ ಭರತ್(2), ಜೆ.ಸುಚಿತ್ (10), ಅಭಿಮನ್ಯು ಮಿಥುನ್ (21) ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ. ತಂಡಲ್ಲೆ ಆಸರೆಯಾದ ಕರುಣ್: ಸಾಲು-ಸಾಲು ವೈಫಲ್ಯದಿಂದ ಕೆಂಗೆಟ್ಟಿದ್ದ ನಾಯಕ ಕರುಣ್ ನಾಯರ್ ಈ ಪಂದ್ಯದಲ್ಲಿ ತಂಡಕ್ಕೆ ಆಸರೆಯಾದರು. ಒದು ತುದಿಯಲ್ಲಿ ವಿಕೆಟ್ ಉರುಳುತ್ತಿದ್ದರೂ, ಮತ್ತೊಂದು ತುದಿಯಲ್ಲಿ ತಾಳ್ಮೆಯ ಬ್ಯಾಟಿಂಗ್ ಮಾಡಿದ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. 185 ಎಸೆತಗಳನ್ನು ಎದುರಿಸಿ ಎಂಟು ಬೌಂಡರಿಯೊಂದಿಗೆ 81 ರನ್ ಗಳಿಸಿ ತಂಡದ ಮಾನ ಕಾಪಾಡಿದರು. ಇಲ್ಲವಾದಲ್ಲಿ ತಂಡ ಮೂರಂಕಿ ದಾಟುತ್ತಿರಲಿಲ್ಲ. ಹಿಮಾಚಲ ಪ್ರದೇಶ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಕನ್ವರ್ ಅಭಿನಯ್ ಐದು ವಿಕೆಟ್ ಗೊಂಚಲು ಪಡೆದರು. ಇವರಿಗೆ ಸಾಥ್ ನೀಡಿದ ರಿಷಿ ಧವನ್ ಮೂರು ವಿಕೆಟ್ ಹಾಗೂ ವೈಭವ್ ಅರೋರ ಎರಡು ವಿಕೆಟ್ ಕಿತ್ತರು. ಹಿಮಾಚಲ ಪ್ರದೇಶಕ್ಕೆ ಆರಂಭಿಕ ಆಘಾತ: ಕರ್ನಾಟಕ ತಂಡವನ್ನು ಬೇಗ ಆಲೌಟ್ ಮಾಡಿದ ಪ್ರವಾಸಿ ತಂಡ ಆರಂಭಿಕ ಆಘಾತಕ್ಕೆ ಒಳಗಾಗಿದೆ. ಆರಂಭದಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ ಪ್ರತೀಕ್ ಜೈನ್, ಸುಮೀತ್ ವರ್ಮಾ (7) ಹಾಗೂ ಅಂಕಿತ್ ಕಲ್ಸಿ (0) ಅವರನ್ನು ಔಟ್ ಮಾಡಿದರು. ಇದಕ್ಕೂ ಮೊದಲು ಪ್ರಶಾಂತ್ ಚೋಪ್ರಾ ಅವರನ್ನು ವಿ ಕೌಶಿಕ್ ಪೆವಿಲಿಯನ್ ಕಳುಹಿಸಿದ್ದರು. ಒಟ್ಟಾರೆ, ಹಿಮಾಚಲ ಪ್ರದೇಶ 29 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ಊ 137 ರನ್ ಹಿನ್ನಡೆಯಲ್ಲಿದೆ.ಕ್ರೀಸ್ ನಲ್ಲಿ ಪ್ರಿಯಾಂಶು ಖಂದಾರಿ (14) ಹಾಗೂ ಮಯಾಂಕ್ ದಗಾರ್ (1) ವಿಕೆಟ್ ಕಾಯ್ದುಕೊಂಡಿದ್ದಾರೆ. ಸಂಕ್ಷಿಪ್ತ ಸ್ಕೋರ್ ಕರ್ನಾಟಕ ಪ್ರಥಮ ಇನಿಂಗ್ಸ್: 67.2 ಓವರ್ ಗಳಿಗೆ 166/10 (ಕರುಣ್ ನಾಯರ್ 85, ಶ್ರೇಯಸ್ ಗೋಪಾಲ್ 27, ಅಭಮನ್ಯು ಮಿಥುನ್ 21; ಕನ್ವರ್ ಅಭಿನಯ್ ಸಿಂಗ್ 37ಕ್ಕೆ 5, ರಿಷಿ ಧವನ್ 27ಕ್ಕೆ 3, ವೈಭವ್ ಅರೋರ 41 ಕ್ಕೆ 2) ಹಿಮಾಚಲ ಪ್ರದೇಶ ಪ್ರಥಮ ಇನಿಂಗ್ಸ್: 17 ಓವರ್ ಗಳಿಗೆ 29/3 (ಪ್ರಿಯಾಂಶು ಖಂದೂರಿ ಔಟಾಗದೆ 14; ಪ್ರತೀಕ್ ಜೈನ್ 11 ಕ್ಕೆ 2, ವಿ. ಕೌಶಿಕ್ 10 ಕ್ಕೆ 1)