ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ ತೆರಿಗೆ ಪಾಲುದಲ್ಲಿ ಮೋಸ ಮಾಡಲಾಗಿದೆ: ಮಾನೆ

ಹಾನಗಲ್ 13: ನಾನಾ ಕಾರಣಗಳಿಂದ ಕಳೆದ ಏಳೆಂಟು ವರ್ಷಗಳಿಂದ ರೈತ ಸಮೂಹ ಸಂಕಷ್ಟದಲ್ಲಿದೆ. ಆರ್ಥಿಕ ಶಕ್ತಿ ಕುಂಠಿತವಾಗುತ್ತಿದೆ.ಹಾಗಾಗಿ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಕುಟುಂಬಗಳಿಗೆ ಪ್ರತಿ ತಿಂಗಳು 4 ರಿಂದ 5 ಸಾವಿರ ರೂ.ಗಳ ನೆರವು ನೀಡುತ್ತಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗಕ್ಕೆ ಸೇರಿರುವ ಅಸಂಖ್ಯಾತ ಕುಟುಂಬಗಳಲ್ಲಿ ನೆಮ್ಮದಿ ಮೂಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.     

ತಾಲೂಕಿನ ದುಮ್ಮಿಹಾಳ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳ ಸಮಗ್ರ ಅಭಿವೃದ್ಧಿ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಅನುದಾನದಡಿ 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರ ಇತ್ತೀಚಿಗೆ ರಾಜ್ಯಗಳಿಗೆ ತೆರಿಗೆ ಪಾಲು ಬಿಡುಗಡೆ ಮಾಡಿದ್ದು, ಅದರಲ್ಲಿಯೂ ಸಹ ಮತ್ತೆ ಕರ್ನಾಟಕಕ್ಕೆ ಮೋಸ ಮಾಡಲಾಗಿದೆ. ಕಡಿಮೆ ತೆರಿಗೆ ಸಂಗ್ರಹವಾಗುವ ರಾಜ್ಯಗಳಿಗೆ ಹೆಚ್ಚಿನ ತೆರಿಗೆ ಪಾಲು ಹಂಚಿಕೆ ಮಾಡಿ ನಮ್ಮ ರಾಜ್ಯಕ್ಕೆ ದ್ರೋಹ ಮಾಡಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಒಟ್ಟಾರೆ 28,152 ಕೋಟಿ ರೂ. ತೆರಿಗೆ ಪಾಲು ಬಿಡುಗಡೆ ಮಾಡಲಾಗಿದ್ದರೆ, ಉತ್ತರ ಪ್ರದೇಶಕ್ಕೊಂದೇ ಬರೋಬ್ಬರಿ 31,962 ಕೋಟಿ ರೂ.ನೀಡಲಾಗಿದೆ. ಕರ್ನಾಟಕಕ್ಕೆ ಏಕೆ ಈ ತಾರತಮ್ಯ ? ಎಂದು ಪ್ರಶ್ನಿಸಿದರು.   

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ,ಮುಖಂಡರಾದ ಲೋಹಿತ್ ಈಳಿಗೇರ, ಅಕ್ಬರಸಾಬ ದೊಡ್ಡನಾಳ, ಗ್ರಾಪಂ ಸದಸ್ಯ ದಾವಲಸಾಬ ನಾಗನೂರ, ಮೌನೇಂದ್ರಗೌಡ ಪಾಟೀಲ, ಪರಶುರಾಮ ಜಾಡರ, ಗುಡ್ಡಪ್ಪ ತೋಟಗೇರ, ಹಸನಸಾಬ ಮುಲ್ಲಾ, ಚಮನಸಾಬ ಮುಲ್ಲಾ, ಹನುಮಯ್ಯ ಈಳಿಗೇರ, ಮಕ್ಬೂಲ್‌ಸಾಬ ದೊಡ್ಡಮನಿ, ಸಿದ್ದಣ್ಣ ಬ್ಯಾತನಾಳ, ಶಂಕ್ರ​‍್ಪ ತೋಟಗೇರ, ಬಸವರಾಜ ಮೆಳ್ಳಳ್ಳಿ, ಕವಿತಾ ಹರಿಜನ, ಮರ್ದಾನಸಾಬ ಅಂಗಡಿ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.