ಬೆಂಗಳೂರು, ಫೆ 12, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಸರೋಜಿನಿ ಮಹಿಷಿ ವರದಿ ಜಾರಿಯಾಗಲೇಬೇಕು ಎಂದು ಒತ್ತಾಯಿಸಿ ಸುಮಾರು 600ಕ್ಕೂ ಅಧಿಕ ಕನ್ನಡ ಪರ ಸಂಘಟನೆಗಳು ನಾಳೆ ರಾಜ್ಯ ವ್ಯಾಪಿ ಬಂದ್ಗೆ ಕರೆ ನೀಡಿವೆ.ಕನ್ನಡ ಒಕ್ಕೂಟ ಸಂಘನೆಗಳ ಅಧ್ಯಕ್ಷ ನಾಗೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 111 ದಿನಗಳಿಂದ ವರದಿ ಜಾರಿಯಾಗಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸಲಿಲ್ಲ. ಹೀಗಾಗಿ ರಾಜ್ಯ ಬಂದ್ ಗಾಗಿ ಕರೆ ನೀಡಲಾಗಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಸರೋಜಿನಿ ಮಹಿಷಿ ವರದಿ ಈ ಬಾರಿ ಜಾರಿಯಾಗಲೇಬೇಕು ಎಂದು ಅವರು ಒತ್ತಾಯಿಸಿದರು.ಈಗಾಗಲೇ 600ಕ್ಕೂ ಹೆಚ್ಚು ಸಂಘಟನೆಗಳು ಕರೆಗೆ ಬೆಂಬಲ ಸೂಚಿಸಿವೆ. ಬಳ್ಳಾರಿ, ದಾವಣಗೆರೆ, ವಿಜಯಪುರ, ಮೈಸೂರು, ಚಿಕ್ಕಮಗಳೂರು ಸೇರಿ ಹಲವೆಡೆ ಸ್ವಯಂ ಪ್ರೇರಿತವಾಗಿ ಪತ್ರಿಕಾಗೋಷ್ಠಿ ಕರೆದು ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದರು.
ನಾಳೆ ನಗರದ ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೂ ಬೃಹತ್ ಪ್ರತಿಭಟನಾ ಜಾಥಾ ನಡೆಸಲಾಗುವುದು. ಈ ಪ್ರತಿಭಟನೆಯಲ್ಲಿ ಸುಮಾರು 30,000ಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.ವಿದ್ಯಾರ್ಥಿ ಸಂಘಟನೆ, ರೈತ ಸಂಘಟನೆಗಳು, ಕಲಾವಿದರು, ಹಿಂದೂಪರ ಸಂಘಟನೆಗಳು, ಸ್ವಾಮೀಜಿಗಳು, ಹೋಟೆಲ್ ಮಾಲೀಕರು ಬಂದ್ ಗೆ ಬೆಂಬಲ ಸೂಚಿಸಿದ್ದು, ನಾಳಿನ ಬಂದ್ ಯಶಸ್ವಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಖಾಸಗಿ ಶಾಲೆಗಳ ಒಕ್ಕೂಟ, ಲಾರಿ ಮಾಲೀಕರ ಸಂಘಟನೆ, ಬ್ಯಾಂಕ್ ನೌಕರರು, ಕೆಎಸ್ ಆರ್ ಟಿಸಿ, ಬಿಎಂಟಿಸಿ ನೌಕರರ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿಲ್ಲ.