ಕಲಬುರಗಿ ಇನ್ನು ಬೆಂಗಳೂರಿಗೆ ಬಹಳ ಹತ್ತಿರ..!!

ಕಲಬುರಗಿ, ಆ. 25     ಕಲಬುರಗಿ ವಿಮಾನ ನಿಲ್ದಾಣವನ್ನು ವಾಣಿಜ್ಯ ಕಾರ್ಯಾಚರಣೆ ಉದ್ದೇಶಕ್ಕಾಗಿ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ಶನಿವಾರ ಹಸ್ತಾಂತರ ಮಾಡಲಾಗಿದೆ.   ಇದರಿಂದ ಹಿಂದುಳಿದ ಹೈದರಾಬಾದ್-ಕರ್ನಾಟಕ ಪ್ರದೇಶ ಈಗ  ಬೆಂಗಳೂರಿಗೆ ಬಹಳ ಹತ್ತಿರವಾಗಿದ್ದು ಈ ಭಾಗದ ಜನರು ರಾಜಧಾನಿಯ ಜೊತೆ ಹೆಚ್ಚಿನ ಒಡನಾಟ ಇಟ್ಟುಕೊಳ್ಳಲು  ಸಹಕಾರಿಯಾಗಲಿದೆ. ಜೊತೆಗೆ ಬಹಳ ಹತ್ತಿರವಾಗಲಿದೆ.!!  ಕಲಬುರಗಿ ವಿಮಾನ ನಿಲ್ದಾಣವನ್ನು ಉಡಾನ್ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ವಿಮಾನ ಕಾರ್ಯಾಚರಣೆಗಾಗಿ ಆಯ್ಕೆ ಮಾಡಲಾಗಿದೆ. ಅಲೈಯನ್ಸ್ ಏರ್ ಮತ್ತು ಘೋಡವತ್ ಏರ್ ಪ್ರೈವೇಟ್ ಲಿಮಿಟೆಡ್ ಕಲಬುರಗಿ-ಬೆಂಗಳೂರು-ಕಲಬುರಗಿ, ಕಲಬುರಗಿ-ಹಿಂಡನ್-ಕಲಬುರಗಿ ಮತ್ತು ಕಲಬುರಗಿ-ತಿರುಪತಿ-ಕಲಬುರಗಿ ಮಾರ್ಗಗಳಿಗೆ 'ಆಯ್ದ ವಿಮಾನಯಾನ ಆಪರೇಟರ್ (ಎಸ್ಎಒ) ಎಂಬ  ಅರ್ಹತೆ ಪಡೆದಿವೆ ಎಂದು ಸರಕಾರಿ ಹೇಳಿಕೆ ತಿಳಿಸಿದೆ.  ಸರ್ಕಾರಿ ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್ಐಐಡಿಸಿ) ಮತ್ತು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರದ ನಡುವೆ ಈ ಕುರಿತು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ.  ಇದರ ಪರಿಣಾಮವಾಗಿ,ಇನ್ನು ಮುಂದೆ   ಕಲಬುರಗಿ ವಿಮಾನ ನಿಲ್ದಾಣವನ್ನು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ ಅಭಿವೃದ್ಧಿಪಡಿಸಿ, ನಿರ್ವಹಣೆ ಮಾಡಲಿದೆ. ಮಾರ್ಚ್ 2007 ರಲ್ಲಿ ಕಲಬುರಗಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಯೋಜನೆಗೆ ಸರಕಾರ  ಸಮ್ಮತಿ ನೀಡಿತ್ತು.