ಬೆಂಗಳೂರು, ಮಾ.23,ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆಯಲು ವಿಶ್ವಬ್ಯಾಂಕ್ ಅನ್ನು ಸಂಪರ್ಕಿಸಬೇಕೆ ಎಂದು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಲಘಟಗಿ ಕ್ಷೇತ್ರದ ಶಾಸಕ ನಿಂಬಣ್ಣನವರ್, ಧಾರವಾಡ-ರಾಮನಗರದ ನಡುವಿನ 62 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 237 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ವಿಳಂಬವಾಗಲು ರೈಲ್ವೆ ಇಲಾಖೆ ಮೇಲು ಸೇತುವೆಗಳ ವಿನ್ಯಾಸ ಬದಲಾಯಿಸಿದ್ದು ಕಾರಣ ಎಂದು ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ಮೂರು ಮೇಲು ಸೇತುವೆಗಳ ಅಗಲ ಮತ್ತು ಎತ್ತರವನ್ನು ರೈಲ್ವೆ ಇಲಾಖೆ ಬದಲಾವಣೆ ಮಾಡಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಶೇ.50ರಷ್ಟು ಹಣವನ್ನು ರೈಲ್ವೆ ಇಲಾಖೆಗೆ ಪಾವತಿಸಿದೆ. ಆದರೆ, ರಸ್ತೆಯ ನಡುವೆ ಅರಣ್ಯ ಪ್ರದೇಶ ಇದ್ದು, ಅಲ್ಲಿ ಕಾಮಕಾರಿ ಮುಂದುವರೆಸಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.ಈ ಹಂತದಲ್ಲಿ ಮಾತನಾಡಿದ ಸಭಾಧ್ಯಕ್ಷರು, ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಎರಡು ಕಡೆಯಿಂದ ಪ್ರಯತ್ನ ಪಟ್ಟರು ಅನುಮತಿ ಸಿಕ್ಕಿಲ್ವೇ. ಅರಣ್ಯ ಇಲಾಖೆ ಭಾರತದ ಒಳಗಿದೇಯೇ ಇಲ್ಲವೇ? ಎಲ್ಲಾ ಕಾಮಗಾರಿಗಳಿಗೆ ಅರಣ್ಯ ಇಲಾಖೆಯ ಅನುಮತಿ ಪಡೆಯುವುದು ಏಕೆ ವಿಳಂಬವಾಗುತ್ತಿದೆ? ಇದರಿಂದ ಅನೇಕ ಅಭಿವೃದ್ಧಿ ಯೋಜನೆಗಳು ಬಾಕಿ ಉಳಿದಿವೆ. ಇದನ್ನು ಸಚಿವರು ಗಂಭೀರವಾಗಿ ಪರಿಗಣಿಸಿ, ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.ನಾವು ಶೇ.80ರಷ್ಟು ಅರಣ್ಯ ಇರುವ ಭಾಗದಿಂದ ಬಂದಿದ್ದೇವೆ. ಅಲ್ಲಿನ ಅನುಮತಿ ಪಡೆಯುವ ಕಷ್ಟ ನಮಗೆ ಗೊತ್ತಿದೆ ಎಂದರು.