ಬೆಂಗಳೂರು,ಆ 08 ದಕ್ಷಿಣ ಒಳನಾಡಿನಲ್ಲಿ ಮಳೆ ಕೈಕೊಟ್ಟ ಹಿನ್ನಲೆಯಲ್ಲಿ ದಕ್ಷಿಣ ಕರ್ನಾಟಕದ ಜೀವನಾಡಿ ಕೆಆರ್ ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳು ಭರ್ತಿಯಾಗುವುದಿಲ್ಲ ಎಂಬ ಆತಂಕ ರೈತರಲ್ಲಿ ಮನೆ ಮಾಡಿತ್ತು ಆದರೆ ಇತ್ತೀಚೆಗೆ ಕೇರಳ ಹಾಗೂ ಮಲೆನಾಡಿನಲ್ಲಿ ಮಳೆ ಅಬ್ಬರ ಹೆಚ್ಚುತ್ತಿದ್ದಂತೆಯೇ ಜಲಾಶಯಕ್ಕೆ ಒಳಹರಿವು ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಕೊಡಗು, ಹಾಸನ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಬಿರುಸುಗೊಂಡ ಹಿನ್ನೆಲೆಯಲ್ಲಿ ಕೆಆರ್ಎಸ್ ಅಣೆಕಟ್ಟೆಯ ಒಳಹರಿವಿನಲ್ಲಿ ಹೆಚ್ಚಳ ಕಂಡು ಬಂದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್ಎಸ್ ಜಲಾಶಯಕ್ಕೆ 26,522 ಕ್ಯೂಸೆಕ್ ಒಳಹರಿವು ಏರಿಕೆಯಾಗಿದೆ. ನಿನ್ನೆ ಬೆಳಗ್ಗೆ 22,719 ಕ್ಯೂಸೆಕ್ ಇದ್ದ ಒಳ ಹರಿವು ಸಂಜೆ ವೇಳೆಗೆ 26,522 ಕ್ಯೂಸೆಕ್ಗೆ ತಲುಪಿದೆ. ಅಣೆಕಟ್ಟೆಯ ಗರಿಷ್ಠ ಮಟ್ಟ 124.80 ಅಡಿ ಇದ್ದು, ಪ್ರಸ್ತುತ 88.60 ಅಡಿ ನೀರು ಸಂಗ್ರವಾಗಿದೆ. ಒಳ ಹರಿವು 26,522 ಕ್ಯೂಸೆಕ್ ಇದ್ದು 15.121 ಟಿಎಂಸಿ ನೀರು ಸಂಗ್ರಹವಾಗಿದೆ. ಕೇರಳದ ವಯನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿ ಭಾರೀ ಹೆಚ್ಚಳವಾಗಿದ್ದು, ಭತರ್ಿಯಾಗಲು ಕೆಲವೇ 3 ಅಡಿಗಳು ಮಾತ್ರ ಬಾಕಿ ಇದೆ. ಹೀಗಾಗಿ ಹೊರಹರಿವು ಕೂಡ ಹೆಚ್ಚಳವಾಗಿದೆ. ಕಬಿನಿ ಜಲಾಶಯದ ನೀರಿನ ಮಟ್ಟ 81 ಅಡಿ ತಲುಪಿದ್ದು, ಗರಿಷ್ಠ ಮಟ್ಟ 84 ಅಡಿ. ಜಲಾಶಯದ ಸದ್ಯದ ಒಳಹರಿವು 23,000 ಕ್ಯೂಸೆಕ್ ಆಗಿದ್ದು, ಹೊರಹರಿವು 10,000 ಕ್ಯೂಸೆಕ್ ಇದೆ. ಜಲಾಶಯದ ಸಂಪೂರ್ಣ ಭರ್ತಿಗೆ 4 ಅಡಿಗಳು ಮಾತ್ರ ಬಾಕಿ ಇದ್ದು, ಒಳಹರಿವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ ಹೊರಹರಿವು ಹೆಚ್ಚಳ ಮಾಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮ ಮಾಹಿತಿ ರವಾನಿಸಿದೆ. ಕಪಿಲಾ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಪಿಲಾ ನದಿಯ ಇಕ್ಕೆಲಗಳ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸಂದೇಶ ರವಾನಿಸಿದ್ದಾರೆ. ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯ ಸಹ ಭರ್ತಿಯಾಗುತ್ತಿದ್ದು, ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2,922 ಅಡಿ ಆಗಿದ್ದು ಪ್ರಸ್ತುತ 2,899.77 ಅಡಿಯಷ್ಟು ಭರ್ತಿಯಾಗಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮಥ್ರ್ಯ 37.103 ಟಿಎಂಸಿಯಾಗಿದ್ದು ಒಳಹರಿವು 28,317 ಕ್ಯೂಸೆಕ್ ಆಗಿದೆ. ಬೇಲೂರು ತಾಲೂಕಿನ ವಾಟೆಹೊಳೆ ಜಲಾಶಯ 8 ವರ್ಷಗಳ ನಂತರ ಭರ್ತಿಯಾಗಿದೆ. ಇದರಿಂದಾಗಿ ಗುರುವಾರ ಬೆಳಗ್ಗೆಯಿಂದ 3 ಕ್ರಸ್ಟ್ ಗೇಟ್ ತೆರೆದು 3,200 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಅತೀ ಕಡಿಮೆ ಸಂಗ್ರಹ ಸಾಮಾಥ್ರ್ಯವಿರುವ ವಾಟೆಹೊಳೆ 1.51 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯ ಇದೆ. ಗುರುವಾರ ಬೆಳಗ್ಗೆ 8 ಗಂಟೆ ವೇಳೆಗೆ 1.35 ಟಿಎಂಸಿ ನೀರು ಸಂಗ್ರಹವಾಗಿತ್ತು. ನೀರಿನ ಒಳಹರಿವು ಹೆಚ್ಚಿರುವುದರಿಂದ ಎಲ್ಲ ಮೂರು ಕ್ರಸ್ಟ್ ಗೇಟ್ ಗಳನ್ನು ತೆರೆದು ನದಿಗೆ ನೀರು ಬಿಡಲು ಅಧಿಕಾರಿಗಳು ನಿರ್ಧರಿಸಿದರು ಎನ್ನಲಾಗಿದೆ. ಜಲಾಶಯಕ್ಕೆ 4500 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಳೆ ಮುಂದುವರಿದಿರುವುದರಿಂದ ಸಂಜೆ ವೇಳೆಗೆ ಒಳ ಹರಿವು ಎಚ್ಚಳ ಸಾಧ್ಯತೆ ಇದ್ದು ಅದರ ಹಿನ್ನಲೆಯಲ್ಲಿ ಹೊರಹರಿವು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 8 ವರ್ಷಗಳಿಂದ ನೀರಿನ ಸಂಗ್ರಹ ಕುಸಿತ ಕಂಡಿದ್ದ ಜಲಾಶಯ ಈ ಬಾರಿ ಆಗಸ್ಟ್ ಮಾಸದಲ್ಲಿಯೇ ಭರ್ತಿಯಾಗಿದೆ. ವಾಟೆಹೊಳೆ ಆಲೂರು ಸಮೀಪ ಯಗಚಿ ನದಿಗೆ ಸೇರಿ ಬಳಿಕ ಹೇಮಾವತಿ ನದಿಗೆ ಸೇರ್ಪಡೆಯಾಗುತ್ತದೆ.