ಬೆಂಗಳೂರು, ಫೆ.14, ನಿರೀಕ್ಷಿತ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರಗೊಂಡಿರುವ ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಕುಮಟಹಳ್ಳಿ ಇದೀಗ 'ಭೂ ಸೇನಾ ನಿಗಮ ಮಂಡಳಿ' ಗೆ ಬೇಡಿಕೆ ಇಟ್ಟಿದ್ದು, ಇಂಜಿನಿಯರಿಂಗ್ ಪದವೀಧರರಾಗಿರುವ ತಮಗೆ ಎಂ.ಎಸ್.ಐ.ಎಲ್ ಬೇಡ ಭೂಸೇನಾ ನಿಗಮವೇ ಬೇಕು ಎಂದಿದ್ದಾರೆ.ತಾವು ಕೇಳಿರುವ ನಿಗಮ ಮಂಡಳಿಯನ್ನು ನೀಡುವ ಸವಾಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದಿದೆ ಎಂದರು. ಉಪಚುನಾವಣೆ ಗೆದ್ದಿರುವ ಎಲ್ಲಾ ಮಾಜಿ ಅನರ್ಹರಿಗೆ ಸಚಿವ ಸ್ಥಾನ ನೀಡಲಾಗತ್ತದೆ ಎನ್ನಲಾಗಿತ್ತು. ಆದರೆ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ದೊರೆತಿಲ್ಲ. ರಮೇಶ್ ಜಾರಕಿಹೊಳಿ ಅವರು ಬಹು ಪ್ರಯತ್ನ ಪಟ್ಟರಾದರೂ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡಲಾಗಿಲ್ಲ. ಯಡಿಯೂರಪ್ಪ ಸರ್ಕಾರ ರಚನೆಗೆ 'ತ್ಯಾಗ' ಮಾಡಿ ಉಪಚುನಾವಣೆ ಸ್ಪರ್ಧಿಸಿ ಗೆದ್ದಿರುವ ಮಹೇಶ್ ಕುಮಟಹಳ್ಳಿ,ಮುಂದಿನ ದಿನಗಳಲ್ಲಿ ನನ್ನ ಮಂತ್ರಿ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಸದ್ಯ ತಾವು ಕೇಳಿರುವ ನಿಗಮ ಮಂಡಳಿ ಕೊಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಸಚಿವ ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲೆಯ ಉಸ್ತುವಾರಿ ನೀಡಿದಲ್ಲಿ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂದು ಶಾಸಕ ಮಹೇಶ್ ಕುಮಟಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.