ದೆಹಲಿ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಇತ್ಯರ್ಥ: ಎಂ.ಬಿ.ಪಾಟೀಲ್

ಬೆಂಗಳೂರು, ಫೆ.7,  ಕೆಪಿಸಿಸಿ  ಅಧ್ಯಕ್ಷ ಸ್ಥಾನ ವಿಚಾರ ಯಥಾಸ್ಥಿತಿಯಲ್ಲಿದ್ದು, ದಿನೇಶ್ ಗುಂಡೂರಾವ್ ಅಧ್ಯಕ್ಷ  ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ಅಂಗೀಕಾರವೂ ಆಗಿಲ್ಲ, ತಿರಸ್ಕಾರವೂ  ಆಗಿಲ್ಲ. ರಾಜೀನಾಮೆ ಇತ್ಯರ್ಥವಾಗುವವರೆಗೂ ಯಾವುದೂ ಸಾಧ್ಯವಿಲ್ಲ. ದೆಹಲಿ ಚುನಾವಣೆ ಬಳಿಕ ಈ  ಗೊಂದಲ ಪರಿಹಾರವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಎಂ.ಬಿ.ಪಾಟೀಲ್  ಹೇಳಿದ್ದಾರೆ‌.ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್ ಪ್ರತಿದಿನ ಕಚೇರಿಗೆ ಹೋಗುತ್ತಾರೆ. ಪಕ್ಷ  ಸಂಘಟನೆಗೆ ಯಾವುದೇ ಸಮಸ್ಯೆಯಿಲ್ಲ. ದಿನೇಶ್ ಗುಂಡೂರಾವ್ ಅವರೇ   ಮುಂದುವರಿಯಬಹುದು. ಸಿದ್ದರಾಮಯ್ಯ ವಿಪಕ್ಷ ಶಾಸಕಾಂಗ ನಾಯಕರಾಗಿ ಮುಂದುವರಿಕೆಗೂ ಅವಕಾಶವಿದೆ ಎಂದರು.

ಮೇಲ್ಮನೆಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂದು ಯಾರನ್ನೂ ಕಣಕ್ಕಿಳಿಸಿಲ್ಲ.ತಾವು ಸೂಚಕರಾಗಿ ಸಹಿ ಹಾಕಿಲ್ಲ. ಕಾಂಗ್ರೆಸ್ ಸಹಿ ಹಾಕಿಲ್ಲ. ಯಾರ ಪರವೂ ವಹಿಸಿಲ್ಲ. ಈ ಬಗ್ಗೆ‌ ಪಕ್ಷದ ಹಿರಿಯರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.ಪುರಭವನದ ಎದುರು ಪ್ರತಿಭಟನೆ  ಮಾಡುವವರು ಹತ್ತು ಲಕ್ಷ ಬಾಂಡ್ ಕೊಡಬೇಕು ಎಂಬ ಸರ್ಕಾರದ ತೀರ್ಮಾನ ಮೂರ್ಖತನದ  ಪರಮಾವಧಿ. ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ದೊರೆಸ್ವಾಮಿಯವರು ಸ್ವಾತಂತ್ರ್ಯ  ಹೋರಾಟಗಾರರು. ಪ್ರತಿಭಟನೆಗೆ ಅವಕಾಶ ವಿಲ್ಲ ಎಂದರೆ ಹೇಗೆ ? ಎಂದು ಪ್ರಶ್ನಿಸಿದರು. ಸಚಿವ ಸಂಪುಟ ವಿಸ್ತರಣೆ ವಿಚಾರ ಬಿಜೆಪಿಯ ಆಂತರಿಕ ವಿಚಾರ. ಇನ್ನು ಎಂಟಿಬಿ, ಪ್ರತಾಪ್ ಗೌಡ, ಮುನಿರತ್ನ ಇದ್ದಾರೆ. ಅವರಿಗೂ ಅವಕಾಶ ಸಿಕ್ಕ ನಂತರವೇ ಅವರಿಗೆಲ್ಲ ಸಮಾಧಾನ ಎಂದು ಸೂಚ್ಯವಾಗಿ ತಿಳಿಸಿದರು.