ಕೆ.ಎಂ.ಕಾರಿಯಪ್ಪ ಪುಣ್ಯಸ್ಮರಣೆ: ಮುಖ್ಯಮಂತ್ರಿ ಸೇರಿ ಗಣ್ಯರ ನಮನ

ಬೆಂಗಳೂರು, ಮೇ 15, ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ, ಅವರ ಅಪ್ರತಿಮ ದೇಶಸೇವೆ, ಶೌರ್ಯ, ಸಾಹಸಗಳನ್ನು ಸ್ಮರಿಸಿಕೊಳ್ಳೋಣ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೌರವ ಸಲ್ಲಿಸಿದ್ದಾರೆ.ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ, ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪನವರ ಪುಣ್ಯತಿಥಿ ಸಂದರ್ಭದಲ್ಲಿ ಅವರ ಅಪ್ರತಿಮ ದೇಶಸೇವೆಯನ್ನು ಸ್ಮರಿಸೋಣ ಎಂದು ಹೇಳಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ಭಾರತೀಯ ಸೇನೆಯ ಪ್ರಪ್ರಥಮ ದಂಡನಾಯಕ, ಹೆಮ್ಮೆಯ ಕನ್ನಡಿಗ, ಕೊಡಗಿನ ವೀರಸೇನಾನಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪನವರ ಪುಣ್ಯತಿಥಿಯಂದು ಅವರ ದೇಶಸೇವೆ, ಶೌರ್ಯ, ಸಾಧನೆಗಳನ್ನು ಆದರಪೂರ್ವಕವಾಗಿ ಸ್ಮರಿಸೋಣ. ಕೆ.ಎಂ.ಕಾರಿಯಪ್ಪನವರು ಕಮಾಂಡರ್-ಇನ್-ಚೀಫ್ ಆಗಿ ನೇಮಕವಾದ ಜನವರಿ 15 ರಂದೇ, ಪ್ರತಿವರ್ಷ ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಗೌರವ ಸಲ್ಲಿಸಿ, ಅಪ್ರತಿಮ ವೀರಯೋಧ, ಕನ್ನಡಾಂಬೆಯ ಹೆಮ್ಮೆಯ ಪುತ್ರ, ಭಾರತಮಾತೆಯ ಅಭ್ಯುದಯಕ್ಕೆ ತನ್ನ ಜೀವನವನ್ನು ಮುಡಿಪಾಗಿಟ್ಟ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಅವರ ಪುಣ್ಯತಿಥಿಯಂದು ನನ್ನ ಗೌರವ ಪ್ರಣಾಮಗಳು. ಅವರ ಜೀವನ ಚರಿತ್ರೆ, ಸಾಹಸಗಾಥೆ ಎಲ್ಲಾ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.