ರಣಜಿ ಟ್ರೋಫಿ: ಬರೋಡ ಮಣಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಕರ್ನಾಟಕ

ಬೆಂಗಳೂರು, ಫೆ 14:   ಪ್ರಸಿದ್ಧ ಕೃಷ್ಣ(45ಕ್ಕೆ 4) ಮಾರಕ ದಾಳಿ ಹಾಗೂ ನಾಯಕ ಕರುಣ್ ನಾಯರ್ (ಔಟಾಗದೆ 71 ರನ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿ ಬರೋಡ ವಿರುದ್ಧ ಎಂಟು ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿತು. ಇಲ್ಲಿನ, ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬರೋಡ ನೀಡಿದ 149 ರನ್ ಗುರಿ ಹಿಂಬಾಲಿಸಿದ ಕರ್ನಾಟಕ ತಂಡ 44.4 ಓವರ್ ಗಳಿಗೆ ಎರಡು ವಿಕೆಟ್ ಕಳೆದುಕೊಂಡು 150 ರನ್ ಗಳಿಸಿ ತವರು ಅಭಿಮಾನಿಗಳ ಎದುರು ಜಯದ ತೋರಣ ಕಟ್ಟಿತು. ಗುಂಪು ಹಂತದ ಪಂದ್ಯಗಳಲ್ಲಿ ಕರ್ನಾಟಕ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಒಟ್ಟು 31 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಕರುಣ್ ನಾಯರ್ ಪಡೆ ಸೆಣಸಲಿದೆ. ಈ ಪಂದ್ಯಕ್ಕೆ ಮನೀಶ್ ಪಾಂಡೆ ಹಾಗೂ ಕೆ.ಎಲ್ ರಾಹುಲ್ ಲಭ್ಯರಾಗುವ ಸಾಧ್ಯತೆ ಇದೆ.ಕರ್ನಾಟಕ ತಂಡದ ಭರವಸೆಯ ಆಟಗಾರ ಎಂದು ಬಿಂಬಿಸಿಕೊಂಡಿರುವ ದೇವದತ್ತ ಪಡಿಕ್ಕಲ್ ಕೇವಲ ಆರು ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ತಂಡದ ಕೇವಲ 14 ರನ್ ಇತ್ತು. ನಂತರ ಜತೆಯಾದ ನಾಯಕ ಕರುಣ್ ನಾಯರ್ ಹಾಗೂ ಆರ್.ಸಮರ್ಥ್ ಜೋಡಿ 46 ರನ್ ಗಳಿಸಿ ತಂಡವನ್ನುಆರಂಭಿಕ ಆಘಾತದಿಂದ ಪಾರು ಮಾಡಿತು. 25 ರನ್ ಗಳಿಸಿ ಸಮರ್ಥ್ ಔಟಾದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ ಕರುಣ್ ನಾಯರ್ ಅದ್ಭುತ ಬ್ಯಾಟಿಂಗ್ ಮಾಡಿದರು. 126 ಎಸೆತಗಳಲ್ಲಿ ಏಳು ಬೌಂಡರಿಯೊಂದಿಗೆ 71 ರನ್ ಗಳಿಸಿ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದರು. ಕೆ.ಸಿದ್ದಾರ್ಥ್ ಅಜೇಯ 29 ರನ್ ಗಳಿಸಿದರು.ಇದಕ್ಕೂ ಮುನ್ನ ಐದು ವಿಕೆಟ್ ಕಳೆದುಕೊಂಡು 208 ರನ್ಗಳಿಂದ ಮೂರನೇ ದಿನದಾಟ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಬರೋಡ ತಂಡ 89.5 ಓವರ್ಗಳಿಗೆ 296 ರನ್ಗಳಿಗೆ ಆಲೌಟ್ ಆಯಿತು. ಆಮೂಲಕ ಕರ್ನಾಟಕಕ್ಕೆ 149 ರನ್ ಸಾಧಾರಣ ಗುರಿ ನೀಡಿತು..ಮೊದಲ ಇನಿಂಗ್ಸ್ನಲ್ಲಿ ಕೇವಲ 85 ರನ್ಗಳಿಗೆ ಆಲೌಟ್ ಆಗಿದ್ದ ಬರೋಡ ತಂಡ ದ್ವಿತೀಯ ಇನಿಂಗ್ಸ್ನಲ್ಲಿ ಕರ್ನಾಟಕ ಬೌಲರ್ಗಳ ಸವಾಲನ್ನು ಮೀರಿ ನಿಂತಿತು. ಇದರ ಫಲವಾಗಿ ದ್ವಿತೀಯ ಇನಿಂಗ್ಸ್ನಲ್ಲಿ 296 ರನ್ ಗಳಿಸಲು ಸಾಧ್ಯವಾಯಿತು. ಇಂದು ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಅಭಿಮನ್ಯು ರಜಪೂತ್ ಹಾಗೂ ಪಾರ್ಥ್ ಕೊಹ್ಲಿ ಜೋಡಿಯು ಮುರಿಯದ ಆರನೇ ವಿಕೆಟ್ಗೆ 52 ರನ್ಗಳ ಜತೆಯಾಟವಾಡಿತು.ಮೂರನೇ ದಿನ ಬೆಳಗ್ಗೆ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಅಭಿಮನ್ಯು ರಜಪೂತ್ 72 ಎಸೆತಗಳಲ್ಲಿ ಎಂಟು ಬೌಂಡರಿಯೊಂದಿಗೆ 52 ರನ್ ಗಳಿಸಿದರು. ಮತ್ತೊಂದು ತುದಿಯಲ್ಲಿ ಇವರಿಗೆ ಹೆಗಲು ನೀಡಿದ್ದ ಪಾರ್ಥ್ ಕೊಹ್ಲಿ 88 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಮೂರು ಬೌಂಡರಿಯೊಂದಿಗೆ 42 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನುಳಿದಂತೆ ಕೊನೆಯಲ್ಲಿ ವಿರಾಜ್ ಭೋಸಲೆ 16 ರನ್ ಗಳಿಸಿ ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು.ಕರ್ನಾಟಕದ ಪರ ಮಿಂಚಿನ ದಾಳಿ ನಡೆಸಿದ ಪ್ರಸಿದ್ಧ ಕೃಷ್ಣ ನಾಲ್ಕು ವಿಕೆಟ್ ಕಿತ್ತು ಬರೋಡ ಪತನಕ್ಕೆ ಪ್ರಮುಖ ಕಾರಣರಾದರು. ಇವರಿಗೆ ಸಾಥ್ ನೀಡಿದ ರೋನಿತ್ ಮೋರೆ ಮೂರು ವಿಕೆಟ್ ಕಿತ್ತರು. ಕೆ.ಗೌತಮ್ ಎರಡು ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ಬರೋಡಪ್ರಥಮ ಇನಿಂಗ್ಸ್: 85ದ್ವಿತೀಯ ಇನಿಂಗ್ಸ್: 89.5 ಓವರ್ಗಳಿಗೆ 296/10 (ಅಹ್ಮದ್ನೂರ್ 90, ದೀಪಕ್ ಹೂಡ 50, ಅಭಿಮನ್ಯು ರಜಪೂತ್ 52, ಪಾರ್ಥ್ ಕೊಹ್ಲಿ 42; ಪ್ರಸಿದ್ಧ ಕೃಷ್ಣ 45 ಕ್ಕೆ 4, ರೋನಿತ್ ಮೋರೆ 68 ಕ್ಕೆ 3, ಕೆ.ಗೌತಮ್ 99 ಕ್ಕೆ 2)ಕರ್ನಾಟಕಪ್ರಥಮ ಇನಿಂಗ್ಸ್:  233/10ದ್ವಿತೀಯ ಇನಿಂಗ್ಸ್: 44.4 ಓವರ್ಗಳಿಗೆ 150/1 (ಕರುಣ್ ನಾಯರ್ ಔಟಾಗದೆ 71, ಕೆ.ಸಿದ್ದಾರ್ಥ್ ಔಟಾಗದೆ 29, ರವಿ ಕುಮಾರ್ ಸಮರ್ಥ್ 25; ಭಾರ್ಗವ್  62 ಕ್ಕೆ 2)