ನವದೆಹಲಿ,ಜ ೨೩,ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂನ ಸ್ಥಾಪಕ ಹಾಗೂ ತಮಿಳು ಸ್ವಾಭಿಮಾನ ಚಳುವಳಿಯ ನಾಯಕ ಇ.ವಿ.ರಾಮಸ್ವಾಮಿ ಪೆರಿಯಾರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಮಾರ್ಕಂಡೇಯ ಕಟ್ಜು ಬೆಂಬಲ ವ್ಯಕ್ತಪಡಿಸಿದ್ದಾರೆ. ಪೆರಿಯಾರ್ ಬ್ರಿಟಿಷ್ ಏಜೆಂಟ್ ಆಗಿ, ಅವರ ಒಡೆದು ಆಳುವ ನೀತಿಯನ್ನು ಮುಂದುವರಿಸಿದ್ದರು ಎಂದು ಕಟ್ಜು ಆರೋಪಿಸಿದ್ದಾರೆ.ತಮಿಳು ನಿಯತಕಾಲಿಕೆ ‘ತುಘಲಕ್’ ೫೦ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್, ತಮ್ಮ ಭಾಷಣದಲ್ಲಿ ಪೆರಿಯಾರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಸೇಲಂನಲ್ಲಿ ೧೯೭೧ರಲ್ಲಿ ನಡೆದ ಮೂಢನಂಬಿಕೆ ವಿರೋಧಿ ಸಮಾವೇಶದಲ್ಲಿ ಪೆರಿಯಾರ್ ನೇತೃತ್ವದಲ್ಲೇ ಭಗವಾನ್ ಶ್ರೀರಾಮ ಹಾಗೂ ಸೀತಾ ದೇವಿ ಬೆತ್ತಲೆ ಪ್ರತಿಕೃತಿಗಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಲಾಗಿತ್ತು. ಆದರೆ ಈ ಸುದ್ದಿಯನ್ನು ತುಘಲಕ್ ನಿಯತಕಾಲಿಕೆ ಮಾತ್ರ ಪ್ರಕಟಿಸಿ, ಘಟನೆಯನ್ನು ಖಂಡಿಸಿತ್ತು ಎಂದು ರಜನೀಕಾಂತ್ ಅವರ ಹೇಳಿಕೆ ತೀವ್ರ ವಿವಾದಕ್ಕೀಡಾಗಿದ್ದು, ತಮಿಳುನಾಡಿನಲ್ಲಿ ಹಲವು ಸಂಘಟನೆಗಳು ರಜನಿ ವಿರುದ್ದ ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನಲೆಯಲ್ಲಿ ನ್ಯಾಯಮೂರ್ತಿ ಕಟ್ಜು, ರಜನಿಕಾಂತ್ ಗೆ ಬೆಂಬಲ ವ್ಯಕ್ತಪಡಿಸಿ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ಬ್ರಿಟಿಷ್ ಆಡಳಿತಗಾರರಿಗೆ ಸ್ಫೂರ್ತಿಯಾಗಿದ್ದ ಹಲವರಂತೆ ಪೆರಿಯಾರ್ ಕೂಡಾ ಬ್ರಿಟೀಷ್ ಏಜೆಂಟ್ ಆಗಿದ್ದರು ಅವರ ಉದ್ದೇಶಗಳು ಏನೇ ಇದ್ದರೂ, ಬ್ರಿಟಿಷರ ಒಡೆದು ಆಳುವ ಸಿದ್ಧಾಂತಕ್ಕೆ ಅನುಗುಣವಾಗಿ ಪೆರಿಯಾರ್ ವ್ಯವಹರಿಸಿದ್ದರು ಎಂದು ಬರೆದುಕೊಂಡಿದ್ದಾರೆ. ಈ ಸಂಬಂಧ ಹಲವು ವೆಬ್‌ಸೈಟ್, ಬ್ಲಾಗ್ ಗಳಲ್ಲಿ ಪ್ರಕಟಿಸಿರುವ ಲೇಖನಗಳನ್ನು ಪರಿಶೀಲಿಸಬಹುದು ಎಂದು ಅವರು ಹೇಳಿದ್ದಾರೆ. ರಜನಿಕಾಂತ್ ರಾಜಕೀಯ ಪ್ರವೇಶಿಸುವುದನ್ನು ೨೦೧೭ ರಲ್ಲಿ ಜಸ್ಟೀಸ್ ಮಾರ್ಕಂಡೇಯ ಕಟ್ಜು ಟೀಕಿಸಿದ್ದರು. ಬಡತನ ಮತ್ತು ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳ ನಿವಾರಣೆಗೆ ರಜನಿ ಅವರಲ್ಲಿ ಪರಿಹಾರವಿದೆಯೇ ಎಂದು ಕಟ್ಜು ಪ್ರಶ್ನಿಸಿದ್ದರು.