ಧಾರವಾಡ 09 : ರಾಜ್ಯ ಸರಕಾರವು ಯುವಕರ ಉದ್ಯೋಗಕ್ಕೆ ಆದ್ಯತೆ ನೀಡಿದೆ. ನಿರುದ್ಯೋಗಿ ಯುವಕರಿಗೆ ಆರ್ಥಿಕ ಭದ್ರತೆ ಹಾಗೂ ಕೌಶಲ್ಯ ಹೆಚ್ಚಳ ಹಾಗೂ ಉದ್ಯೋಗ ಹುಡಕಲು ಅನುಕೂಲವಾಗುವಂತೆ ಯುವನಿಧಿ ಗ್ಯಾರಂಟಿ ಯೋಜನೆ ಮೂಲಕ ಪ್ರತಿ ತಿಂಗಳು ನಿರ್ಧಿಷ್ಟ ಅವಧಿಗೆ ಆರ್ಥಿಕ ಸಹಾಯ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದ ಉದ್ಯೋಗ ಮೇಳದ ನಂತರ ತಾಲೂಕು ಹಾಗೂ ವಿಧಾನಸಭಾ ಕ್ಷೇತ್ರ ಹಂತದಲ್ಲಿ ಬೃಹತ್ತ ಉದ್ಯೋಗ ಮೇಳಗಳ ಆಯೋಜನೆಗೆ ಸರಕಾರದ ಹಂತದಲ್ಲಿ ನಿರ್ಧರಿಸಲಾಗಿದೆ ಎಂದು ಹಿರಿಯ ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ಕೆಸಿಡಿ ಆವರಣದ ಡಾ.ವಿ.ಕೃ.ಗೋಕಾಕ ಕೇಂದ್ರ ಗ್ರಂಥಾಲಯ ಆವರಣ ಹಾಗೂ ಕಾಲೇಜಿನ ವಿವಿಧ ವಿಭಾಗಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ ಇಲಖೆ ಸಂಯುಕ್ತವಾಗಿ ಆಯೋಜಿಸಿರುವ ಉದ್ಯೋಗ ಮೇಳ-2025 ಕ್ಕೆ ಚಾಲನೆ ನೀಡಿ, ಮಾತನಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರವು ಎಲ್ಲ ಕ್ಷೇತ್ರಗಳಂತೆ ಉದ್ಯಮ ಮತ್ತು ಉದ್ಯೋಗ ಕ್ಷೇತ್ರಕ್ಕೂ ಆದ್ಯತೆ ನೀಡಿದೆ. ಉತ್ತರ ಕರ್ನಾಟಕದಲ್ಲಿ ಉದ್ಯಮಗಳ ಹೆಚ್ಚಳಕ್ಕೆ ಮುತುವರ್ಜಿ ವಹಿಸಿದೆ. ಇನ್ವೆಸ್ಟ್ ಕರ್ನಾಟಕ ಸಮ್ಮೇಳನದ ಮೂಲಕ ದೇಶ, ವಿದೇಶಗಳ ಕೈಗಾರಿಕೊದ್ಯಮಿಗಳನ್ನು ಉತ್ತರ ಕರ್ನಾಟಕ, ವಿಶೇಷವಾಗಿ ಹುಬ್ಬಳ್ಳಿ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಆಹ್ವಾನಿಸಿದ್ದು, ಹಕವಾರು ಉದ್ಯಮಗಳು ಬಂಡವಾಳ ಹೂಡಿ, ಕೈಗಾರಿಕೆಗಳನ್ನು ಆರಂಭಿಸಲು ಮುಂದೆ ಬಂದಿವೆ. ಇದರಿಂದ ನಮ್ಮ ಭಾಗದ, ನಮ್ಮ ಜಿಲ್ಲೆಯ ಯುವಕ, ಯುವತಿಯರಿಗೆ ಉದ್ಯೋಗದಲ್ಲಿ ಹೆಚ್ಚು ಆದ್ಯತೆ ದೊರಕಲಿದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಮತ್ತು ಜಿ.ಪಂ.ಸಿಇಓ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಉದ್ಯೋಗ ಮೇಳ-2025 ನ್ನು ಅಚ್ಚುಕಟ್ಟಾಗಿ, ಉತ್ತಮ ರೀತಿಯಲ್ಲಿ ಸಂಘಟಿಸಿದ್ದಾರೆ. ಈಗಾಗಲೇ ನಿನ್ನೆ ರಾತ್ರಿಯವರೆಗೆ ವಿವಿಧ ಪದವಿ ಪಡೆದಿರುವ ಸುಮಾರು 7,550 ಜನ ಯುವಕ, ಯುವತಿಯರು ಉದ್ಯೋಗ ಬಯಸಿ, ತಮ್ಮ ಹೆಸರು ನೋಂದಾಯಿಸಿದ್ದಾರೆ. ಮತ್ತು ಉದ್ಯೋಗ ಮೇಳದ ಸ್ಥಳದಲ್ಲಿಯೂ ನೋಂದಣಿಗೆ ಅವಕಾಶ ಇರುವದರಿಂದ ಈ ಸಂಖ್ಯೆ ಹೆಚ್ಚಾಗುತ್ತದೆ. ವಿವಿಧ ಸ್ಥಳದಲ್ಲಿ ಉದ್ಯೋಗ ನೀಡಲು 93 ಕೈಗಾರಿಕೆಗಳು, 20 ಮಾನವ ಸಂಪನ್ಮೂಲ ಸಂಸ್ಥೆಗಳು ಸುಮಾರು 12,145 ರಷ್ಟು ಉದ್ಯೋಗ ನೀಡಲು ಉದ್ಯೋಗಮೇಳದಲ್ಲಿ ಭಾಗಿ ಆಗಿವೆ. ಇದರಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದೆ ಎಂದು ಶಾಸಕರು ತಿಳಿಸಿದರು.
ಉದ್ಯೋಗಕ್ಕೆ ಸೇರುವ ವ್ಯಕ್ತಿಗಳು ತಾಳ್ಮೆ, ಸಹನೆಯಿಂದ ಕೆಲಸ ಮಾಡಬೇಕು. ತರಬೇತಿ ನೀಡಿ, ಕೌಶಲ್ಯಭರಿತರನ್ನಾಗಿ ಮಾಡಿದ ನಂತರ ಏಕಾಎಕಿ ಕೈಗಾರಿಕೆ, ಕಂಪನಿಗಳನ್ನು ತೊರೆಯಬಾರದು. ಉದ್ಯಮಗಳ ಬೆಳವಣಿಗೆ, ಸ್ಥಿರತೆ ಅಷ್ಟೆ ಮುಖ್ಯವಾಗಿದೆ ಎಂದು ಅವರು ಹೇಳಿದರು.ಇಂದಿನ ಉದ್ಯೋಗ ಮೇಳದಲ್ಲಿ ಭಾಗವಹಿಸಿರುವ ಯುವಕ, ಯುವತಿಯರಿಗೆ ಸಂದರ್ಶನದ ನಂತರ ಅಲ್ಲಿಯೇ ಒಪ್ಪಿಗೆ ಪತ್ರ ನೀಡಲಾಗುತ್ತಿದೆ. ಜಿಲ್ಲೆಯ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಯೋಜನಾ ನಿರ್ದೇಶಕಿ ರೇಖಾ ಡೋಳ್ಳಿನವರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರವೀಂದ್ರ ದ್ಯಾಬೇರ, ತಹಶಿಲ್ದಾರ ಡಿ.ಎಚ್.ಹೂಗಾರ ಸೇರಿದಂತೆ ಜಿಲ್ಲೆಯ ಎಲ್ಲ ತಹಶಿಲ್ದಾರರು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಉದ್ಯೋಗ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಶಾಸಕರು ಹಾಗೂ ಅಧಿಕಾರಿಗಳು ಉದ್ಯೋಗ ಮೇಳದ ಸಂದರ್ಶನ ಸ್ಥಳಗಳಿಗೆ ಭೇಟಿ ನೀಡಿ, ಉದ್ಯಮಿಗಳ ಹಾಗೂ ಸಂದರ್ಶನಕ್ಕೆ ಬಂದಿರುವ ಯುವಕ, ಯುವತಿಯರಿಂದ ಮಾಹಿತಿ ಪಡೆದುಕೊಂಡರು.