ಕೋಜಿಕ್ಕೋಡ್, ನ 28- ಕೇರಳ ಸಾಹಿತ್ಯ ಪ್ರೇಮಿಗಳಿಗೆ ಅಕ್ಕಿತಂ ಎಂಬ ಕಾವ್ಯನಾಮದಿಂದಲೇ ಜನಪ್ರಿಯರಾಗಿರುವ ಮಲೆಯಾಳಂ ಹಿರಿಯ ಸಾಹಿತಿ ಅಚ್ಯುತನ್ ನಂಬೂದರಿ ಅವರಿಗೆ ಸಾಹಿತ್ಯಕ್ಕಾಗಿ ನೀಡುವ ಅತ್ಯಂತ ಪ್ರತಿಷ್ಟಿತ ಜ್ಞಾನಪೀಠ ಪುರಸ್ಕಾರವನ್ನು ಶುಕ್ರವಾರ ದೆಹಲಿಯಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ
93 ವರ್ಷದ ಉತ್ತರ ಕೇರಳದ ಈ ಹಿರಿಯ, ಹೃದಯದಿಂದಲೇ ಬರೆಯುವ ಸಾಹಿತಿ ಎಂದೇ ಮಲೆಯಾಳಂ ಓದುಗ ಪ್ರೇಮಿಗಳಲ್ಲಿ ಜನಪ್ರಿಯರಾಗಿದ್ದಾರೆ.
ಅಕ್ಕಿತಂ ಅವರು ಜ್ಞಾನಪೀಠ ಪುರಸ್ಕಾರ ಸ್ವೀಕರಿಸಲಿರುವ 6ನೇ ಮಲೆಯಾಳಂ ಸಾಹಿತಿಯಾಗಿದ್ದಾರೆ. 1965ರಲ್ಲಿ ಜಿ.ಎಸ್. ಕುರುಪ್, 1980ರಲ್ಲಿ ಎಸ್.ಕೆ. ಪೊಟ್ಟೆಕಾಡ್, 1984ರಲ್ಲಿ ಥಕಾಯಿ ಶಿವಶಂಕರ ಪಿಳ್ಳೈ, 1995ರಲ್ಲಿ ಎಂ.ಟಿ. ವಾಸುದೇವನ್ ನಾಯರ್ ಹಾಗೂ 2007ರಲ್ಲಿ ಓ ಎನ್ ವಿ ಕುರುಪ್ ಜ್ಞಾನ ಪೀಠ ಪ್ರಶಸ್ತಿಗೆ ಭಾಜನರಾಗಿದ್ದರು.
1926ರ ಮಾರ್ಚ್ 18 ರಂದು ಪಾಲಕ್ಕಾಡ್ ಜಿಲ್ಲೆಯ ಕುಮರನಲ್ಲೂರ್ ಸಮೀಪ ಅಮೆಟ್ಟಿಕರದಲ್ಲಿ ಎಎಎಂ ವಾಸುದೇವನ್ ನಂಬೂದರಿ ಹಾಗೂ ಸಿ.ಎಂ ಪಾರ್ವತಿ ಅಂಥರಾಜನಂ ದಂಪತಿಗೆ ಜನಿಸಿದ ಅಕ್ಕಿತಂ ಮಲೆಯಾಳಂ ಸಾಹಿತ್ಯದಲ್ಲಿ ಅತ್ಯಂತ ಸರಳ ಹಾಗೂ ಓದುಗರು ಸುಲಭವಾಗಿ ಗ್ರಹಿಸುವ ಬರವಣಿಗೆಗೆ ಹೆಸರುವಾಸಿಯಾಗಿದ್ದಾರೆ.
ಆದರೆ, ಈ ಹಿರಿಯ ಸಾಹಿತಿಯ ಭಾಷಾಂತರ ಕೃತಿ ಶ್ರೀಮದ್ ಭಾಗವತಂ ಅತ್ಯಂತ ಜನಪ್ರಿಯ ಮೌಲಿಕ ಬರಹವಾಗಿದೆ.
ಭಗವಾನ್ ವಿಷ್ಣುವಿನ ಅವತಾರ ಕುರಿತು ವೇದ ವ್ಯಾಸ ರಚಿಸಿರುವ ಶ್ರೀಮದ್ ಭಾಗವತಂನ 14,163 ಶ್ಲೋಕಗಳನ್ನು 2. 400 ಪುಟಗಳಲ್ಲಿ ಅಕ್ಕಿತಂ ಮಲೆಯಾಳಂಗೆ ಭಾಷಾಂತರಿಸಿ ಅಡಕಗೊಳಿಸಿದ್ದಾರೆ.