ಜಾರ್ಖಂಡ್ ಫಲಿತಾಂಶ; ಮತ್ತೊಮ್ಮೆ ಬುಡಕಟ್ಟು ಜನರ ಮನವೊಲಿಕೆಗೆ ಮುಂದಾಗಬೇಕಿದೆ ಬಿಜೆಪಿ

ನವದೆಹಲಿ, ಡಿ 25 ಇತ್ತೀಚೆಗೆ ನಡೆದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 28 ಪರಿಶಿಷ್ಟ ಪಂಗಡದ ಮೀಸಲು ಸ್ಥಾನಗಳಲ್ಲಿ ಪ್ರಾಬಲ್ಯ ಸಾಧಿಸುವಲ್ಲಿ ಬಿಜೆಪಿ ಎಡವಿದ್ದು, 25 ಸ್ಥಾನಗಳು ವಿಪಕ್ಷಗಳ ಪಾಲಾಗಿವೆ. ಸಿಮ್ಡೆಗಾ, ಗುಮ್ಲಾ, ಸಿಂಗ್‌ಭೂಮ್, ಲೋಹರ್‌ದಾಗ, ಲತೇಹರ್, ಡುಮ್ಕಾ ಮತ್ತು ಪಕೌರ್ ಸೇರಿದಂತೆ ಹಲವಾರು ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಲ್ಲಿ ಬಿಜೆಪಿ ತನ್ನ ಪ್ರಭಾವ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇಲ್ಲಿನ ಪ್ರತಿಭಟನಾಕಾರರ ಮೇಲೆ ಪೊಲೀಸರು ದೌರ್ಜನ್ಯ, ದೇಶದ್ರೋಹ ಪ್ರಕರಣಗಳ ದಾಖಲು ಮತ್ತು ಕೃಷಿ ಭೂಮಿಯನ್ನು ಕಸಿದುಕೊಳ್ಳುವ ಪ್ರಯತ್ನಗಳಿಂದ ಆಕ್ರೋಶಗೊಂಡ ಬುಡಕಟ್ಟು ಸಮುದಾಯದ ಮತದಾರರು ಕೇಸರಿ ಪಕ್ಷವನ್ನು ತಿರಸ್ಕರಿಸಿದ್ದಾರೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಜಾರ್ಖಂಡ್ ಚುನಾವಣಾ ಫಲಿತಾಂಶವು ಕ್ರಿಶ್ಚಿಯನ್ ಧರ್ಮ ಮತ್ತು ಮತಾಂತರಕ್ಕೆ ಸಂಬಂಧಿಸಿದ ಅಂಶಗಳು ಮತ್ತು ಸಾಮಾಜಿಕ-ರಾಜಕೀಯ ಬೆಳವಣಿಗೆಗಳನ್ನು ಒಳಗೊಂಡಿದೆ ಎಂಬುದನ್ನು ಸೂಚಿಸುತ್ತದೆ.  ಈಗ ಬಿಜೆಪಿ ನಾಯಕರು ಫಲಿತಾಂಶದ ಪರಿಶೀಲನಾ ಪ್ರಕ್ರಿಯೆ ಪ್ರಾರಂಭಿಸಲಿರುವುದರಿಂದ, ಒಡಿಶಾ, ಛತ್ತೀಸ್ ಗಢ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬುಡಕಟ್ಟು ಪ್ರಾಬಲ್ಯದ ಕ್ಷೇತ್ರಗಳ ಕುರಿತು ಹೆಚ್ಚಿನ ಗಮನ ಹರಿಸುವ ಅವಶ್ಯಕತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.  ಹಿಂದೆ ಆರ್ ಎಸ್ ಎಸ್ ನ ಅಂಗ ಸಂಸ್ಥೆ ವನವಾಸಿ ಕಲ್ಯಾಣ ಆಶ್ರಮ, ಬುಡಕಟ್ಟು ಜನರ ಕಲ್ಯಾಣ, ಹಕ್ಕುಗಳ ರಕ್ಷಣೆ ಮತ್ತು ಉದ್ಯೋಗ ಮತ್ತು ಶಿಕ್ಷಣವನ್ನು ಒದಗಿಸುವಂತಹ ಸಮಸ್ಯೆಗಳನ್ನು ಬಗೆಹರಿಸಲು ತೆರೆಮರೆಯಿಂದ ಪಟ್ಟುಬಿಡದೆ ಮಾಡಿದ ಉತ್ತಮ ಕಾರ್ಯದ ಲಾಭವನ್ನು ಬಿಜೆಪಿ ಪಡೆದುಕೊಂಡಿತ್ತು.  ಬುಡಕಟ್ಟು  ಪ್ರದೇಶಗಳು  ಮತ್ತು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ರಾಜಕೀಯವಾಗಿ ಹೇಗೆ ಅಧಿಕಾರಕ್ಕೇರಿತು ಎಂಬುದನ್ನು ಪಕ್ಷ  ಒಮ್ಮೆ ಅವಲೋಕಿಸುವ ಅವಶ್ಯಕತೆಯಿದೆ. ಮಾರ್ಚ್ 2018 ರಲ್ಲಿ ಇದಕ್ಕೆ ವ್ಯತಿರಿಕ್ತವಾದ ಚಿತ್ರವಿತ್ತು.  ಏಕೆಂದರೆ ಆಗ ನಾವು ಮೂರು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರದಲ್ಲಿ ಗೆಲುವು ಸಾಧಿಸಿದ್ದೆವು ಎಂದು ಪಕ್ಷದ ಮೂಲಗಳು ತಿಳಿಸಿವೆ. ತ್ರಿಪುರದ ಕಮ್ಯುನಿಸ್ಟರಿಂದ ಅಧಿಕಾರವನ್ನು ಕಸಿದುಕೊಳ್ಳುವ ಬಿಜೆಪಿಯ ಸಾಮರ್ಥ್ಯ ಮತ್ತು ನಾಗಾಲ್ಯಾಂಡ್‌ನ ಸ್ಥಳೀಯ ಪಕ್ಷ ಎನ್‌ಡಿಪಿಪಿ ಮತ್ತು ಮೇಘಾಲಯದ ಎನ್‌ಪಿಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೇರುವ ಚಾಕಚತ್ಯತೆಯನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಆಗ ಪಕ್ಷದ ವಿರುದ್ಧವಾಗಿ ಪ್ರಬಲ ಪ್ರಚಾರ ನಡೆದಿದ್ದರೂ, ಕ್ರಿಶ್ಚಿಯನ್ ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಜನರು ಪಕ್ಷದ ಪರವಾಗಿ ಮತ ಚಲಾಯಿಸಿದ್ದರು.