ಸಚಿವರಿಗೆ ಖಾತೆ ಹಂಚಿಕೆ: ಜಾರಕಿಹೊಳಿಗೆ ಜಲ ಸಂಪನ್ಮೂಲ, ಭೈರತಿಗೆ ನಗರಾಭಿವೃದ್ಧಿ, ಸೋಮಶೇಖರ್ ಗೆ ಸಹಕಾರ

ಬೆಂಗಳೂರು,ಫೆ. 10 :   ವಿಧಾನಸಭೆ ಉಪಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರ ರಚನೆಗೆ ಕಾರಣೀಭೂತರಾದವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವಾದ ನಾಲ್ಕು ದಿನಗಳ ನಂತರ ಖಾತೆಗಳನ್ನು ಹಂಚಿಕೆಮಾಡಿದ್ದು, ರಮೇಶ್ ಲಕ್ಷ್ಮಣರಾವ್ ಜಾರಿಕಿಹೊಳಿಗೆ ಪ್ರಬಲ ಜಲ ಸಂಪನ್ಮೂಲ ಖಾತೆ ನೀಡಲಾಗಿದೆ. 

ಭೈರತಿ ಬಸವರಾಜು ಅವರಿಗೆ ಬೆಂಗಳೂರು ಹೊರತುಪಡಿಸಿದಂತೆ ನಗರಾಭಿವೃದ್ಧಿ, ಎಸ್.ಟಿ. ಸೋಮಶೇಖರ್ ಗೆ ಸಹಕಾರ ಇಲಾಖೆ ಜವಾಬ್ದಾರಿ ವಹಿಸಲಾಗಿದೆ. ಆದರೆ ತಮಗೆ ವಹಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆ ಬಗ್ಗೆ ಡಾ. ಕೆ. ಸುಧಾಕರ್ ತಕರಾರು ತೆಗೆದಿದ್ದಾರೆ. ಕೆಲವರಲ್ಲಿ ತಮಗೆ ಪ್ರಬಲ ಖಾತೆ ಸಿಕ್ಕಿಲ್ಲ ಎನ್ನುವ ಅಸಮಾಧಾನವಿದ್ದು, ಇದು ಸ್ಪೋಟಗೊಳ್ಳುವ ಲಕ್ಷಗಳು ಕಾಣಿಸಿಕೊಂಡಿದೆ.  

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಕಳುಹಿಸಿದ್ದ ಪಟ್ಟಿಗೆ ರಾಜ್ಯಪಾಲ ವಜೂಭಾಯಿವಾಲಾ ಅಂಕಿತ ಹಾಕಿದ್ದಾರೆ. ಈ ಮೂಲಕ ಸಚಿವ ಸಂಪುಟದಲ್ಲಿ 28 ಸಚಿವರಿಗೂ ಖಾತೆಗಳ ಜವಾಬ್ದಾರಿ ನೀಡಿದ್ದಾರೆ. 

ಉಳಿದಂತೆ ಡಾ. ಕೆ. ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ, ಬಿ.ಸಿ ಪಾಟೀಲ್ ಅವರಿಗೆ ಅರಣ್ಯ, ಶ್ರೀಮಂತ ಪಾಟೀಲ್ ಅವರಿಗೆ ಜವಳಿ ಖಾತೆ ನೀಡಲಾಗಿದೆ. ಶಿವರಾಮ್ ಹೆಬ್ಬಾರ್ ಅವರಿಗೆ ಕಾರ್ಮಿಕ ಖಾತೆ, ನಾರಾಯಣ ಗೌಡ ಅವರಿಗೆ  ಪೌರಾಡಳಿತ ಮತ್ತು ತೋಟಗಾರಿಕೆ ಖಾತೆ, ಕೆ. ಗೋಪಾಲಯ್ಯ ಅವರಿಗೆ ಸಣ್ಣ ಕೈಗಾರಿಕೆ, ಸಕ್ಕರೆ ಖಾತೆ, ಆನಂದ್ ಸಿಂಗ್ ಗೆ ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಬೈರತಿ ಬಸವರಾಜ್ ಅವರಿಗೆ ನಗರಾಭಿವೃದ್ಧಿ ಖಾತೆ (ಬೆಂಗಳೂರು ಅಭಿವೃದ್ದಿ ಹೊರತುಪಡಿಸಿ) ನೀಡಲಾಗಿದೆ.

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಿಭಾಯಿಸುತ್ತಿದ್ದ ಜಲ ಸಂಪನ್ಮೂಲ ಖಾತೆಯನ್ನು ತಮಗೇ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಶಿವಕುಮಾರ್ ಗೆ ಸರಿಸಮನಾಗಿ ನಿಲ್ಲಬೇಕೆಂಬ ಅವರ ಬೇಡಿಕೆಯನ್ನು ಯಡಿಯೂರಪ್ಪ ಕೊನೆಗೂ ಈಡೇರಿಸಿದ್ದಾರೆ. 

ನಗರಾಭಿವೃದ್ಧಿ ಖಾತೆಗಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಆದರೆ ಬೆಂಗಳೂರು ನಗರಾಭಿವೃದ್ಧಿಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಬಿಡಿಎ, ಬಿ.ಡಬ್ಲ್ಯೊ.ಎಸ್.ಎಸ್.ಬಿ, ಬಿ.ಎಂ.ಆರ್.ಡಿ.ಎ., ಬಿ.ಎಂ.ಆರ್.ಸಿ.ಎಲ್, ಕೆ.ಯು.ಡಬ್ಲ್ಯೊ.ಎಸ್.ಡಿ.ಬಿ, ಕೆ.ಯು.ಐ.ಡಿ.ಎಫ್.ಸಿ, ನಗರಾಭಿವೃದ್ಧಿ ಯೋಜನಾ ನಿರ್ದೇಶನಾಲಯವನ್ನು ಹೊರತುಪಡಿಸಿ ನಗರಾಭಿವೃದ್ಧಿ ಇಲಾಖೆಯನ್ನು ಭೈರತಿ ಬಸಬರಾಜು ಅವರಿಗೆ ನೀಡಿದ್ದಾರೆ. 

ಡಾ. ಕೆ. ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ನೀಡಿದ್ದು, ತಮಗೆ ವಹಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ. ತಾವು ಕೇಳಿದ್ದೇ ಒಂದು,ಮುಖ್ಯಮಂತ್ರಿ ಅವರು ತಮಗೆವಹಿಸಿದ್ದೇ ಮತ್ತೊಂದು. ಆದರೆ ಈ ಬಗ್ಗೆ ತಾವು ಮುಖ್ಯಮಂತ್ರಿ ಅವರ ಜತೆಯೇ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. 

ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿಸಿದ್ದ ಎಸ್.ಟಿ.ಸೋಮಶೇಖರ್ ಅವರಿಗೆ ಸಹಕಾರ ನೀಡಿ ಸಮಾಧಾನಪಡಿಸಲಾಗಿದೆ. ವಸತಿ ಸಹಕಾರ ಮಹಾಮಂಡಲ ಅಧ್ಯಕ್ಷರಾಗಿ ಕೆಲಸ ಮಾಡಿದ್ದು, ಅವರಿಗೆ ಸಹಕಾರ ಇಲಾಖೆ ನೀಡಿ ಸಮಾಧಾನಪಡಿಸಿದ್ದಾರೆ. 

ನೂತನ ಸಚಿವರಿಗೆ ಹಂಚಿಕೆಯಾದ ಖಾತೆ‌ ಪಟ್ಟಿ

ರಮೇಶ್ ಜಾರಕಿಹೊಳಿ- ಜಲಸಂಪನ್ಮೂಲ

ಬಿ.ಸಿ.ಪಾಟೀಲ್- ಅರಣ್ಯ

ಎಸ್.ಟಿ.ಸೋಮಶೇಖರ್- ಸಹಕಾರ

ಬಿ.ಎ.ಬಸವರಾಜು- ನಗರಾಭಿವೃದ್ಧಿ

ಡಾ.ಕೆ.ಸುಧಾಕರ್- ವೈದ್ಯಕೀಯ ಶಿಕ್ಷಣ

ಕೆ.ಗೋಪಾಲಯ್ಯ- ಸಣ್ಣ ಕೈಗಾರಿಕೆ, ಸಕ್ಕರೆ

ಶಿವರಾಮ್ ಹೆಬ್ಬಾರ್- ಕಾರ್ಮಿಕ

ಶ್ರೀಮಂತ ಪಾಟೀಲ್- ಜವಳಿ

ನಾರಾಯಣ ಗೌಡ- ಪೌರಾಡಳಿತ,ತೋಟಗಾರಿಕೆ

ಆನಂದ್ ಸಿಂಗ್- ಆಹಾರ ಮತ್ತು ನಾಗರಿಕ ಪೂರೈಕೆ