ಶ್ರೀನಗರ, ಜ 12 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮುಂಜಾನೆ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಟ್ರಾಲ್ ನ ವಸತಿ ಸಮುಚ್ಛಯದ ಪ್ಲಾಟ್ ನಲ್ಲಿ ಕೆಲವು ಉಗ್ರರು ಅಡಗಿದ್ದಾರೆ ಎಂಬ ಗುಪ್ತಚರ ಸಂಸ್ಥೆಗಳ ಮಾಹಿತಿ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಈ ಪ್ರದೇಶಕ್ಕೆ ತೆರಳಿ ಶೋಧನೆ ಆರಂಭಿಸಿದರು. ಈ ಸಂದರ್ಭದಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡು ಹಾರಿಸಿದ್ದರಿಂದ ಎರಡು ಕಡೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ.
ಭದ್ರತಾ ಪಡೆಗಳು ಪ್ರಸ್ತುತ ಗುಲ್ಷನ್ ಪೊರಾ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಗುಂಡಿನ ಚಕಮಕಿ ನಡೆದಿರುವ ಬಗ್ಗೆ ವರದಿಯಾಗಿದೆ. ಮತ್ತೊಂದು ಘಟನೆಯಲ್ಲಿ, ಶೋಫಿಯಾನ್ನ ನರ್ಬಲಾದ ಒಂಪೊರಾದಲ್ಲಿ ಉಗ್ರರ ನೆಲೆಯನ್ನು ಪೊಲೀಸರು ಪತ್ತೆ ಹಚ್ಚಿದ್ದು, ಅಲ್ಲಿದ್ದ ಕೆಲವು ಬ್ಲಾಂಕೆಟ್ಸ್ , ಆಹಾರ ಪದಾರ್ಥಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.