ಬಳ್ಳಾರಿಗೆ ಬಂದ ಜಮೀರ್ ಅಹ್ಮದ್ ಪೊಲೀಸ್ ವಶಕ್ಕೆ; ರೆಡ್ಡಿಗೆ ಸವಾಲು ಹಾಕಿದ ಶಾಸಕ
ಬಳ್ಳಾರಿ, ಜ.13, ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆ ಖಂಡಿಸಿ ಅವರ ಮನೆ ಮುಂದೆ ಪ್ರತಿಭಟಿಸಲು ಆಗಮಿಸಿದ ಶಾಸಕ ಜಮೀರ್ ಅಹ್ಮದ್ ಅವರನ್ನು ಪೊಲೀಸರು ನಗರದ ಹೊರಭಾಗದಲ್ಲೇ ಬಂಧಿಸಿದ್ದಾರೆ.ರೆಡ್ಡಿ ಅವರ ಮನೆಗೆ ನಡೆದುಕೊಂಡು ಬರುತ್ತಿದ್ದ ಜಮೀರ್ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ಬಳ್ಳಾರಿಯ ಹೊರವಲಯದ ಕಂಟ್ರಿ ಕ್ಲಬ್ ಬಳಿ ವಶಕ್ಕೆ ಪಡೆದರು. ಈ ವೇಳೆ ಅವರ ಬೆಂಬಲಿಗರು ಘೋಷಣೆ ಕೂಗಿದರು.ಸೋಮಶೇಖರ ರೆಡ್ಡಿ ಅವರನ್ನು ಬಂಧಿಸಬೇಕು, ಇಲ್ಲದಿದ್ದರೆ ಜನವರಿ 13ರಂದು ರೆಡ್ಡಿ ಮನೆ ಮುಂದೆ ಧರಣಿ ನಡೆಸುವುದಾಗಿ ಕಳೆದ ವಾರ ಜಮೀರ್ ಅಹ್ಮದ್ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಅದರಂತೆ ಇಂದು ಬಳ್ಳಾರಿ ಆಗಮಿಸಿದ ಜಮೀರ್ ಅಹ್ಮದ್ ಅವರನ್ನು ನೂರಾರು ಬೆಂಬಲಿಗರು ಸ್ವಾಗತಿಸಿದರು.
ಪ್ರತಿಭಟನೆಗೆ ಅವಕಾಶ ನೀಡುವಂತೆ ಜಮೀರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದರು, ಪತ್ರ ಸ್ವೀಕರಿಸಿದ್ದ ಪೊಲೀಸರು ಸ್ವೀಕೃತಿ ಪತ್ರ ಮಾತ್ರ ನೀಡಿ ಕಳುಹಿಸಿದ್ದರು. ಸ್ವೀಕೃತಿ ಪತ್ರ ಅನುಮತಿ ಪತ್ರ ಅಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದರು.ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ಬಳ್ಳಾರಿಯಲ್ಲಿ ಶಾಂತಿ ಕದಡಲು ಇಲ್ಲಗೆ ಬಂದಿಲ್ಲ. ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಬಂದಿದ್ದೇವೆ. ಪೊಲೀಸರು ಬಂಧಿಸುವುದಾದರೆ ಬಂಧಿಸಲಿ, ಅಥವಾ ಗುಂಡು ಹೊಡೆಯುವುದಾದರೆ ಹೊಡೆಯಲಿ ಎಂದು ಹೇಳಿದರು.
ನಿಮ್ಮನ್ನು ಉಫ್ ಎಂದರೆ ನಿಮ್ಮ ಗತಿ ಏನಾಗಬೇಡ ಎಂದು ರೆಡ್ಡಿ ಸವಾಲು ಹಾಕಿದ್ದಾರೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಪೊಲೀಸ್ ಇಲಾಖೆಯಿಂದ ಅನುಮತಿ ಕೇಳಿದ್ದೆ. ಅರ್ಜಿಯ ಸ್ವೀಕೃತಿ ಪತ್ರವನ್ನು ಕೂಡ ನೀಡಿದ್ದಾರೆ. ಪ್ರತಿಭಟನೆ ನಡೆಸುತ್ತೇವೆ. ಪೊಲೀಸರ ಬಗ್ಗೆ ಗೌರವವಿದೆ. ಅವರು ಕಾನೂನು ಸುವ್ಯವಸ್ಥೆ ಕಾಪಾಡಬೇಕಾಗಿರುವುದು ಅವರ ಕರ್ತವ್ಯ. ನನ್ನನ್ನು ಬಂಧಿಸುವುದಾದರೆ ಬಂಧಿಸಲಿ, ಗುಂಡು ಹೊಡೆಯುವುದಾದರೆ ಹೊಡೆಯಲಿ. ಈಗಾಗಲೆ ಬಿಜೆಪಿ ಸರ್ಕಾರ ಹಲವರನ್ನು ಗುಂಡಿಟ್ಟು ಹತ್ಯೆ ಮಾಡಿದೆ. ಮಂಗಳೂರಿನಲ್ಲಿ ಇಬ್ಬರು ಪ್ರತಿಭಟನಕಾರರನ್ನು ಹತ್ಯೆ ಮಾಡಿದೆ ಎಂದು ಹೇಳಿದರು.ರೆಡ್ಡಿ ಹೇಳಿಕೆಯಿಂದಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಎನ್‌ಆರ್‌ಸಿ, ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ತಮ್ಮ ನೇತೃತ್ವದಲ್ಲಿಯೂ ಪ್ರತಿಭಟನೆ ನಡೆದಿತ್ತು ಎಂದು ಹೇಳಿದರು.ರೆಡ್ಡಿ ಎಲ್ಲಪ್ಪ ನಿನ್ನ ಖಡ್ಗ, ಬಳ್ಳಾರಿಗೆ ಬಂದಿದ್ದೀನಿ' ಎಂದು ಜಮೀರ್ ಅಹ್ಮದ್ ಇದೇ ವೇಳೆ ಕೇಳಿದರು.
ನ್ಯಾಯಾಲಯ ಕೂಡ ಜಾಮೀನು ಅರ್ಜಿ ತಿರಸ್ಕರಿಸಿದೆ. ಮುಖ್ಯಮಂತ್ರಿ ಅವರು ವೇದಿಕೆಯಲ್ಲಿ ರೆಡ್ಡಿಯನ್ನು ಹೊಗಳುತ್ತಾರೆ, ಅಂದರೆ ಇದು ಏನನ್ನು ತೋರಿಸುತ್ತದೆ ಎಂದು ಜಮೀರ್ ಪ್ರಶ್ನಿಸಿದರು.ಜನವರಿ 5 ರಂದು ಬಳ್ಳಾರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಸೋಮಶೇಖರ್ ರೆಡ್ಡಿ “ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುವವರನ್ನು ಬಂದೂಕಿನಿಂದ ಗುಂಡಿಕ್ಕಿದರೆ ಜನಸಂಖ್ಯೆಯಾದರೂ ಕಡಿಮೆಯಾಗುತಿತ್ತು. ನಾವು ಶೇಕಡಾ 80ರಷ್ಟು ಜನರ ಇದ್ದೇವೆ, ನೀವು ಕೇವಲ 17ರಷ್ಟು ಮಾತ್ರ.....ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು.
ಸೋಮಶೇಖರ್ ರೆಡ್ಡಿ ಹೇಳಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದರು. ಈ ಹೇಳಿಕೆ ಬೆನ್ನಲ್ಲೇ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಸೋಮಶೇಖರ್ ರೆಡ್ಡಿ ವಿರುದ್ಧ ಹರಿಹಾಯ್ದು, ಬಳ್ಳಾರಿಗೆ ಬರುತ್ತೇನೆ, ರೆಡ್ಡಿ ಏನು ಮಾಡುತ್ತಾರೆ ನೋಡೋಣ ಎಂದು ಸವಾಲು ಹಾಕಿದ್ದರು.ಈ ಮಧ್ಯೆ ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಪ್ರತಿಕ್ರಿಯಿಸಿ, ಬಳ್ಳಾರಿಯ ಜನರು ಶಾಂತಿಪ್ರಿಯರು, ರೆಡ್ಡಿ ಹೇಳಿಕೆ ಖಂಡನೀಯ. ಆದರೂ ಇಲ್ಲಿನ ಎಲ್ಲಾ ಮುಸ್ಲಿಮರು ಶಾಂತಿ ಕಾಪಾಡುವುದಾಗಿ ಭರವಸೆ ನೀಡಿದ್ದಾರೆ. ಜಮೀರ್ ಅಹ್ಮದ್ ಜೊತೆಯೂ ತಾವು ಮಾತುಕತೆ ನಡೆಸಿ, ಇಲ್ಲಿಗೆ ಬಾರದಂತೆ ಮನವಿ ಮಾಡಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ. ಈಗಾಗಲೇ ಮಾತು ಕೊಟ್ಟಾಗಿದೆ, ಬರಲೇಬೇಕು ಎಂದು ಜಮೀರ್ ತಿಳಿಸಿದ್ದಾರೆ ಎಂದು ಹೇಳಿದರು.