ಈ ಕೃತಿ ಬಿ. ಎಚ್‌. ಶ್ರೀಧರರಿಗೆ ಸಂದ ಬಹು ದೊಡ್ಡ ಗೌರವ: ಕೃಷ್ಣರಾವ್

This work is a great tribute to B. H. Sridhar: Krishna Rao

ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ 

ಬೆಳಗಾವಿ 27- "ಪ್ರೊ. ಬಿ. ಎಚ್‌. ಶ್ರೀಧರ ಅವರಂತಹ ಘನ ವಿದ್ವಾಂಸರ ಬದುಕು ಮತ್ತು ಸಾಧನೆಯನ್ನು ಅತ್ಯಂತ ಸಮರ್ಥವಾಗಿ ಹಿಡಿದಿಡುವ ಕೃತಿಯನ್ನು ಬರೆದ ಎಲ್‌. ಎಸ್‌. ಶಾಸ್ತ್ರಿಯವರ ಕಾರ್ಯ ಪ್ರಶಂಸನಾರ್ಹ. ಇದು ಶ್ರೀಧರರಿಗೆ ಸಂದ ಬಹುದೊಡ್ಡ ಗೌರವ" ಎಂದು ಹಿರಿಯ ಸಾಹಿತಿ ಶಾ. ಮಂ.ಕೃಷ್ಣರಾವ್ ಅವರಿಲ್ಲಿ ಹೇಳಿದರು.          

ಸಿರಸಿಯ ಆರಾಧನಾ ಸಭಾಗೃಹದಲ್ಲಿ ಬೆಳಗಾವಿಯ ಹಿರಿಯ ಸಾಹಿತಿ ಪತ್ರಕರ್ತ ಶಾಸ್ತ್ರಿಯವರು ದೆಹಲಿ ಸಾಹಿತ್ಯ ಅಕಾಡೆಮಿಗಾಗಿ  ರಚಿಸಿದ "ಬಿ. ಎಚ್‌. ಶ್ರೀಧರ" ಜೀವನ ಚರಿತ್ರೆಯನ್ನು ಲೋಕಾರ​‍್ಣಗೊಳಿಸಿ ಮಾತನಾಡುತ್ತಿದ್ದ ಕೃಷ್ಣರಾವ್ ಅವರು ನಮ್ಮಲ್ಲಿ ಶ್ರೀಧರರಂತೆಯೇ ಅಲಕ್ಷಿತರಾದವರು ಸಾಕಷ್ಟು ಪ್ರತಿಭಾವಂತರಿದ್ದು ಅವರನ್ನೆಲ್ಲ ಗುರುತಿಸುವ ಕೆಲಸವಾಗಬೇಕೆಂದರು.          ಬಿ. ಎಚ್‌. ಶ್ರೀಧರ ಪ್ರಶಸ್ತಿ ಸಮಿತಿಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಖ್ಯಾತ ಪ್ರಾಧ್ಯಾಪಕ , ವಿಮರ್ಶಕ ಡಾ. ಎಂ. ಜಿ. ಹೆಗಡೆ ಅವರು ಕೃತಿಪರಿಚಯ ಮಾಡಿಕೊಡುತ್ತ ಕೇಂದ್ರ ಅಕಾಡೆಮಿಯ ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆಯಲ್ಲಿ ಈ ಕೃತಿ ಪ್ರಕಟವಾಗಿರುವುದು ಹೆಮ್ಮೆಯ ಸಂಗತಿ. ಶಾಸ್ತ್ರಿಯವರು ಶ್ರೀಧರರ ಹತ್ತಿರದ ಒಡನಾಟ ಹೊಂದಿದವರಾಗಿದ್ದು ಅವರ ವ್ಯಕ್ತಿತ್ವವನ್ನು ಸಮರ್ಥವಾಗಿ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆಂದರು.              

ಕೃತಿಕಾರ ಎಲ್‌. ಎಸ್‌. ಶಾಸ್ತ್ರಿಯವರು ಮಾತನಾಡಿ ತಮಗೆ ಶ್ರೀಧರರೊಡನಿದ್ದ ಒಡನಾಟವನ್ನು ನೆನಪಿಸಿಕೊಂಡು ಅಗಾಧ ಪ್ರಮಾಣದ ಶಕ್ತಿಯುತ ಸಾಹಿತ್ಯ ರಚನೆ ಮಾಡಿದ ಶ್ರೀಧರರ ಕುರಿತು ಬೃಹತ್ ಕೃತಿಯೊಂದು ಹೊರಬರಬೇಕಾಗಿದ್ದು ಆದಷ್ಟು ಬೇಗ ಅದನ್ನು ತಾವು ರಚಿಸಬಯಸಿರುವುದಾಗಿ ತಿಳಿಸಿದರು.

ನಾ. ಜಗದೀಶರಿಂದ ಪ್ರಾರ್ಥನೆ, ಸಿ. ಆರ್‌. ಶಾನಭಾಗರಿಂದ ಸ್ವಾಗತ ಮತ್ತು ನಿರೂಪಣೆಗಳಾದವು. ಪ್ರೊ. ಶ್ರೀಧರರ ಪುತ್ರ ರಾಜಶೇಖರ ಹೆಬ್ಬಾರ ಅವರು ಕೃತಿಯ ಗೌರವ ಪ್ರತಿಗಳನ್ನು ಎಲ್ಲರಿಗೂ ನೀಡಿದರು.  ಹಿರಿಯ ಪತ್ರಕರ್ತ ಸಾಹಿತಿ ಅಶೋಕ ಹಾಸ್ಯಗಾರ, ಜಯರಾಮ ಹೆಗಡೆ, ಭಾಗೀರಥಿ ಹೆಗಡೆ, ಕೃಷ್ಣ ಪದಕಿ, ಜಿ.ಎಂ. ಹೆಗಡೆ ತಾರಗೋಡ, ಎಚ್‌. ಆರ್‌. ಅಮರನಾಥ, ವಿ. ಪಿ. ಹೆಗಡೆ, ಡಿ. ಜಿ. ಹೆಗಡೆ, ಲಕ್ಷ್ಮಣ ಶಾನಭಾಗ, ಎಲ್‌. ಆರ್‌. ಭಟ್ಟ, ವಿಜಯಾ ಭಟ್ಟ, ವಾಸುದೇವ ಶಾನಭಾಗ, ಜಿ. ಕೆ. ಭಟ್, ಮಂಜುನಾಥ ಬಕ್ಕಳ ಮೊದಲಾದವರು ಉಪಸ್ಥಿತರಿದ್ದರು.