ಬೆಂಗಳೂರು, ಏ.2,ಕೊರೊನಾ ಸೋಂಕು ನಿಯಂತ್ರಿಸಲು ಲಾಕ್ ಡೌನ್ ಮಾಡಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಮೇಲೆ ಸಾರ್ವಜನಿಕರು ಹಲ್ಲೆ, ಯತ್ನ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ಕುರಿತು ಮಾಜಿ ಸಚಿವ ಜಮೀರ್ ಅಹ್ಮದ್, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳಿಗೆ ಸಹಕಾರ ನೀಡದೆ, ಅವರ ಮೇಲೆ ಹಲ್ಲೆ ಮಾಡುವುದು ಅಕ್ಷಮ್ಯ ಅಪರಾಧ ಎಂದು ಅವರು ಟ್ವೀಟ್ ಮಾಡಿದ್ದಾರೆ.ಈ ಇಲಾಖೆಗಳೆಲ್ಲ ತಮ್ಮ ಜೀವದ ಹಂಗುತೊರೆದು ಹಗಲಿರುಳು ಕೆಲಸ ಮಾಡುತ್ತಿರುವುದು ಜನರ ಆರೋಗ್ಯ ರಕ್ಷಣೆಗೆ, ಇದನ್ನು ಪ್ರತಿಯೊಬ್ಬರೂ ಅರಿಯಬೇಕು. ತಮ್ಮ ಆರೋಗ್ಯದ ಮಾಹಿತಿ ಕೇಳಿ ಬರುವ ಸರ್ಕಾರಿ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ನೀಡಿ, ಆರೋಗ್ಯ ಸಮಸ್ಯೆ ಇದ್ದವರು ಹತ್ತಿರದ ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿ ಎಂದಿದ್ದಾರೆ.ಇನ್ನು ದೇಶವೇ ಕೊರೊನಾ ವಿರುದ್ಧ ಒಂದಾಗಿ ಹೋರಾಡುತ್ತಿರುವಾಗ ಉದ್ಧಟತನದ ಪ್ರದರ್ಶನ ಬೇಡ. ಸಹಕಾರ ಮತ್ತು ಸಂಯಮವೇ ಕೊರೊನಾ ತಡೆಗಟ್ಟಲು ಇರುವ ಏಕೈಕ ದಾರಿ ಎಂದು ಅವರು ಟ್ವಿಟರ್ ಮೂಲಕ ಜನತೆಯಲ್ಲಿ ಮನವಿ ಮಾಡಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿ, ತಮ್ಮ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡ ಹೊರಟಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಉಗುಳಿರುವ ದುರುಳರಿಗೆ ಯಾವ ಕ್ಷಮೆಯೂ ಇಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.