ಜೈಪುರ : ಜಾಲಿ ಮೂಡ್ ನಲ್ಲಿ ಕೈ ಶಾಸಕರು

ಮುಂಬೈ, ನ 12 :       ಮಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗೆ ಕಾಂಗ್ರೆಸ್ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ ಜೈಪುರದ ರೆಸಾರ್ಟ್ನಲ್ಲಿ ಬೀಡುಬಿಟ್ಟಿರುವ ಕೈ ಶಾಸಕರು ಹೆಂಡತಿ, ಮಕ್ಕಳು ಸೇರಿದಂತೆ ಕುಟುಂಬದೊಂದಿಗೆ ಜಾಲಿ ರೈಡ್ ಮಾಡುತ್ತಿದ್ದಾರೆ.    ಕಳೆದೆರಡು ದಿನಗಳಿಂದ ಜೈಪುರದ ಸುಸಜ್ಜಿತ ಐಷಾರಾಮಿ ರೆಸಾರ್ಟ್ನಲ್ಲಿ ತಂಗಿರುವ 44 ಕಾಂಗ್ರೆಸ್ ಶಾಸಕರು ಎರಡು ದಿನಗಳಿಂದ ರಾಜಸ್ತಾನದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ರಾಜಕೀಯ ಜಂಜಡ, ಒತ್ತಡ ಮರೆತು ಜಾಲಿಯಾಗಿ ಪ್ರವಾಸದಲ್ಲಿ ಮುಳುಗಿದ್ದಾರೆ.    ಶಾಸಕರು ಅಜ್ಮೀರ್ ದರ್ಗಾ, ಪುಷ್ಕರದಲ್ಲಿರುವ ಪ್ರಸಿದ್ಧ ಬ್ರಹ್ಮದೇವಾಲಯ ಮತ್ತಿತರ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.    ಇನ್ನೊಂದೆಡೆ ರಾಜ್ಯದಲ್ಲಿ ಬಿಜೆಪಿಯೇತರ ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ನಾಯಕರಾದ ಸುಶೀಲ್ ಕುಮಾರ್ ಶಿಂಧೆ, ಮಾಜಿ ಮುಖ್ಯಮಂತ್ರಿಗಳಾದ ಪೃಥ್ವಿರಾಜ್ ಚೌಹಾನ್, ಅಶೋಕ್ ಚೌಹಾನ್, ರಾಜ್ಯ ಕಾಂಗ್ರೆಸ್ ಘಟಕದ ಮುಖ್ಯಸ್ಥ ಬಾಳಾ ಸಾಹೇಬ್ ತೋರಟ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮತ್ತು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಡುವಿಲ್ಲದ ರಾಜಕೀಯ ಸಂಧಾನ ಸಭೆಗಳಲ್ಲಿ ನಿರತರಾಗಿದ್ದಾರೆ.